ಬೆಂಗಳೂರು ನಗರ

ತೃತೀಯ ಲಿಂಗಿ ಕಲಾವಿದರಿಂದ ಕಲಾತ್ಮಕವಾಗಿ ಮತದಾನದ ಜಾಗೃತಿ

ಬೆಂಗಳೂರು: ಪ್ರಜಾಪ್ರಭುತ್ವದ ಜೀವಾಳವೇ ಮತದಾನ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ನಮ್ಮ ಭಾರತ ಕಳೆದ 75 ವರ್ಷಗಳಿಂದ ಜನರಿಂದ ಜನರಿಗಾಗಿ ಜನಪ್ರತಿನಿಧಿಗಳನ್ನು ಚುನಾಯಿಸಿ ಸರ್ಕಾರಗಳನ್ನು ಆಯ್ಕೆ ಮಾಡುತ್ತಿದೆ. ಬದಲಾದ ಜನಜೀವನದ ನಡುವೆ ಸಹ ಪ್ರಜಾಪ್ರಭುತ್ವ ಗಟ್ಟಿಯಾಗುತ್ತ ಸಾಗುತ್ತಿದೆ.

ಪ್ರಜಾತಂತ್ರದ ವ್ಯವಸ್ಥೆಯ ಜನಪ್ರತಿನಿಧಿಗಳ ಆಯ್ಕೆ ಮೂಲಕ ದೇಶದ ಭವಿಷ್ಯವನ್ನು ಬರೆಯುವ ಗುರುತರ ಜವಾಬ್ದಾರಿ ದೇಶದ ಜನರ ಮೇಲಿದೆ. ನಮ್ಮ ದೇಶದಲ್ಲಿ ಈವರೆಗೂ 400ಕ್ಕಿಂತ ಹೆಚ್ಚಿನ ಚುನಾವಣೆಗಳನ್ನು ಭಾರತ ಚುನಾವಣಾ ಆಯೋಗ ಯಶಸ್ವಿಯಾಗಿ ನಿರ್ವಹಿಸಿದೆ. ಅದರಲ್ಲಿ ಮುಖ್ಯವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆ ಮತ್ತು ಲೋಕಸಭೆ, ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ವಿಧಾನಪರಿಷತ್ ಚುನಾವಣೆಗಳು ಸಹ ಒಳಗೊಂಡಿವೆ.

ಪ್ರಸ್ತುತ ನಮ್ಮ ರಾಜ್ಯದಲ್ಲಿ 16ನೇ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ರ ಚುನಾವಣೆ ನಡೆಯುತ್ತಿದೆ. ಮೇ 10 ರಂದು ಮತದಾನ ಮತ್ತು ಮೇ 13 ರಂದು ಮತ ಎಣಿಕೆ ನಡೆಯಲಿದೆ. ಇಂತಹ ಮಹತ್ವಯುತ ಕಾರ್ಯದಲ್ಲಿ ಜನರ ಸಹಭಾಗಿತ್ವವನ್ನು ಖಾತ್ರಿಪಡಿಸಲು ಹಾಗೂ ಜನರಲ್ಲಿ ಮತದಾನದ ಅರಿವನ್ನು ಮೂಡಿಸಲು ಕರ್ನಾಟಕದ ಮುಖ್ಯಚುನಾವಣಾಧಿಕಾರಿಗಳು ವಿನೂತನ ಕ್ರಮಗಳನ್ನು ಕೈಗೊಂಡಿದೆ. ನಗರವಾಸಿ ಮತದಾರರಿಗಾಗಿ ಮತ್ತು ಯುವ ಮತದಾರರನ್ನು ಸೆಳೆಯಲು ವೋಟ್ ಫೆಸ್ಟ್, ಬೈಕ್ ರ್ಯಾಲಿ, ಜಾನಪದ, ಯಕ್ಷಗಾನ, ಬೀದಿನಾಟಕ ಸೇರಿದಂತೆ ಹೀಗೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ಮತಗಟ್ಟೆಯತ್ತ ಸೆಳೆಯುವ ಹಲವು ಪ್ರಯತ್ನಗಳನ್ನು ಸಾಕಾರಗೊಳಿಸಲಾಗುತ್ತಿದೆ.

ಬೆಂಗಳೂರು ನಗರ ಅಂತರರಾಷ್ಟ್ರೀಯ ನಗರವೆಂಬ ಮಾನ್ಯತೆಯನ್ನು ಪಡೆದಿದೆ. ದೇಶ ವಿದೇಶಗಳು ಸೇರಿದಂತೆ ನಮ್ಮ ದೇಶದ ವಿವಿಧ ರಾಜ್ಯಗಳ ಜನರು ತಮ್ಮ ಜೀವನವನ್ನು ಕಂಡುಕೊಳ್ಳಲು ನಗರದಲ್ಲಿ ನೆಲೆಸಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ, ಬೆಂಗಳೂರು ನಗರದಲ್ಲಿ ಕಡಿಮೆ ಮತದಾನದ ಪ್ರಮಾಣ ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರದ ಜನತೆಯನ್ನು ಮತಗಟ್ಟೆಯತ್ತ ಸೆಳೆಯಲು ಮುಖ್ಯ ಚುನಾವಣಾಧಿಕಾರಿಗಳು ಮಾಡಿರುವ ಮತ್ತೊಂದು ವಿಶಿಷ್ಟ ಪ್ರಯತ್ನವೇ ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ತಂಡ”ಅರವಾಣಿ ಆರ್ಟ್ ಪ್ರಾಜೆಕ್ಟ್” ಮೂಲಕ ಗೋಡೆಗಳ ಮೇಲೆ ಚುನಾವಣಾ ಜಾಗೃತಿಯ ಚಿತ್ತಾರದ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬುದ್ಧ, ಬಸವ, ಅಂಬೇಡ್ಕರ್ ರವರ ಸಿದ್ಧಾಂತಗಳಂತೆ ಸಮಾನತೆ, ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕಿದೆ. ತೃತೀಯ ಲಿಂಗಿಗಳು ಅಥವಾ ಲಿಂಗ ಅಲ್ಪಸಂಖ್ಯಾತರು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಹಿಂಜರಿಯುವ ಪರಿಸ್ಥಿತಿಯನ್ನು ಸುಧಾರಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮುಖ್ಯಚುನಾವಣಾಧಿಕಾರಿಗಳ ಕಚೇರಿ ಪರೋಕ್ಷವಾಗಿ ಮಾಡುತ್ತಿದೆ.

ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ಅರವಾಣಿ ಆರ್ಟ್ ಪ್ರಾಜೆಕ್ಟ್ ತಂಡವೊಂದು ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ರ ಚುನಾವಣೆ ಬೆಂಗಳೂರು ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯಚುನಾವಣಾಧಿಕಾರಿ ಕಚೇರಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 3 ಮಹಡಿಯ ನೂತನ ಕಟ್ಟಡದ ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಬಣ್ಣದ ಚಿತ್ತಾರವನ್ನು ಮೂಡಿಸಿದೆ. ಮತದಾನದ ಮಹತ್ವ , ಯುವಕರ, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲರ ಸಹಭಾಗಿತ್ವವನ್ನು ಸಾರುವ ವೈಶಿಷ್ಟ್ಯಪೂರ್ಣ ವರ್ಣಚಿತ್ರಗಳನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು ತೃತೀಯ ಲಿಂಗಿ ಕಲಾವಿದರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ತೃತೀಯ ಲಿಂಗಿ ಸಮುದಾಯವನ್ನು ಸಶಕ್ತಗೊಳಿಸುವ ಆಶಯದಿಂದ ಹುಟ್ಟಿಕೊಂಡ ಸಂಸ್ಥೆ, ಅರವಾಣಿ ಆರ್ಟ್ ಪ್ರಾಜೆಕ್ಟ್ . ತೃತೀಯ ಲಿಂಗಿಗಳ ಕೀಳರಿಮೆಯನ್ನು ತೊಡೆದು, ಅಸಮಾನತೆಯನ್ನು ಹೋಗಲಾಗಿಡಿಸಿ, ತಮ್ಮ ಕಲಾಪ್ರತಿಭೆಯಿಂದ ಸಮಾಜದಲ್ಲಿ ಆರ್ಥಿಕ ಸಬಲೀಕರಣವನ್ನು ಕಂಡುಕೊಳ್ಳಲು ಸಹಕರಿಸುವ ಈ ಸಂಸ್ಥೆಯ ಕಲಾವಿದರು ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ತೃಂತೀಯ ಲಿಂಗಿ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯತ್ತ ಇರಿಸಲಾದ ಮುಖ್ಯ ಚುನಾವಣಾಧಿಕಾರಿಗಳ ಈ ಹೆಜ್ಜೆಗೆ ಜನಮನ್ನಣೆಯೂ ದೊರೆತಿದೆ. ಈ ಹಿನ್ನಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು , ಕರ್ನಾಟಕ ಇವರು ಮತದಾನದ ಮಹತ್ವವನ್ನು ಸಾರುವ ಕಲಾಕೃತಿಗಳನ್ನು ಬೆಂಗಳೂರಿನ ಮೆಟ್ರೊ ಪಿಲ್ಲರ್ ಗಳು, ಸರ್ಕಾರಿ ಕಚೇರಿ ಗೋಡೆಗಳು ಸೇರಿದಂತೆ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಮತದಾನ ಕುರಿತ ಚಿತ್ರಕಲೆ ರಚಿಸಲು ಅರವಾಣಿ ಆರ್ಟ್ ಪ್ರಾಜೆಕ್ಟ್ ತಂಡಕ್ಕೆ ಮತ್ತೊಂದು ಸದಾವಕಾಶವನ್ನು ನೀಡಿದೆ. ಪ್ರಮುಖ ಸ್ಥಳಗಳಲ್ಲಿ ಹಾಕಿರುವ ಮತದಾನದ ಮಹತ್ವ ಸಾರುವ ಕಲಾಚಿತ್ರಗಳು ಆ ಹಾದಿಯಲ್ಲಿ ಸಾಗುವ ಸಾವಿರಾರು ಕಣ್ಣುಗಳ ಗಮನಕ್ಕೆ ಬರಲಿದೆ. ಜನರನ್ನು ಪ್ರಜಾಪ್ರಭುತ್ವದ ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮಾಡುವ ಮುಖ್ಯಚುನಾವಣಾಧಿಕಾರಿಗಳ ಈ ಹೊಸ ಪ್ರಯತ್ನ ವಿನೂತನವಾಗಿದೆ ಮತ್ತು ತೃತೀಯ ಲಿಂಗಿಗಳಿಗೆ ಅವಕಾಶ ನೀಡುವ ಮೂಲಕ ಸಮಾನತೆಯನ್ನು ಸಾರುತ್ತದೆ.

Related Articles

Leave a Reply

Your email address will not be published. Required fields are marked *

Back to top button