ಮೈಸೂರು

ಗೌತಮ ಪಂಚ ಮಹಾ ರಥೋತ್ಸವಕ್ಕೆ ಕ್ಷಣಗಣನೆ

ನಂಜನಗೂಡು ನಗರದಲ್ಲಿ ಏಪ್ರಿಲ್ 2 ಭಾನುವಾರದಂದು ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ರವರ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಶ್ರೀ ಗೌತಮ ಪಂಚ ಮಹಾ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ನಂಜನಗೂಡು ನಗರದಲ್ಲಿ ದೇಶದಲ್ಲಿ ಎಲ್ಲೂ ನಡೆಯದ ಪಂಚಮಹಾ ರಥೋತ್ಸವವು ನಾಳೆ ನಂಜನಗೂಡಿನಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಮೊದಲು ಗಣಪತಿ ರಥೋತ್ಸವ ನಂತರ ಶ್ರೀ ನಂಜುಂಡೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ, ಪಾರ್ವತಿ ಅಮ್ಮನವರ ರಥೋತ್ಸವ, ಬಳಿಕ ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿಯವರ ಐದು ರಥಗಳು ಒಂದಾದ ನಂತರ ಒಂದು ಒಟ್ಟಾಗಿ ರಥದ ಬೀದಿಯಲ್ಲಿ ಸಾಗಲಿವೆ.

ಅದಕ್ಕಾಗಿ ನೂರಾರು ಟನ್ ತೂಕದ ನೂರು ಅಡಿ ಎತ್ತರದ ಬೃಹತ್ ರಥ ಸೇರಿದಂತೆ ಐದು ರಥಗಳನ್ನು ವಿಶೇಷವಾಗಿ ಬಣ್ಣ ಬಣ್ಣದ ಬಾವುಟ ಹಾಗೂ ಬಂಟಿಂಗ್ಸ್ ಗಳಿಂದ ಅಲಂಕರಿಸಲಾಗಿದ್ದು, ರಥೋತ್ಸವಕ್ಕೆ ಸಿದ್ಧವಾಗಿ ನಿಂತಿವೆ .‌ ಇನ್ನು ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು, ಅನ್ನದಾಸೋಹ, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯಗಳು ,ಕಪಿಲಾ ನದಿ ತೀರದಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಸೆಡ್ಡುಗಳನ್ನು ನಿರ್ಮಾಣ ಮಾಡಲಾಗಿದೆ .

ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಇಂದೇ ಆಗಮಿಸಿ ದೇವಾಲಯದ ಸುತ್ತಮುತ್ತ ಹಾಗೂ ಮೊಗ ಶಾಲೆಯಲ್ಲಿ ಬೀಡು ಬಿಟ್ಟಿದ್ದಾರೆ .ಇನ್ನು ದೇವಾಲಯವು ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದಾನಿಗಳು ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ .

ದೇವಾಲಯದ ಸುತ್ತಮುತ್ತ ತಾತ್ಕಾಲಿಕ ಹೋಟೆಲ್ ಗಳು ಪೂಜಾ ಸಾಮಗ್ರಿ, ಅಂಗಡಿಗಳು, ಸಿಹಿ ಮತ್ತು ಕಾರ ತಿನಿಸು ಅಂಗಡಿಗಳು, ಸೇರಿದಂತೆ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ತಲೆಯೆತ್ತಿವೆ, ನಾಳೆ ಬೆಳಿಗ್ಗೆ 6:00ಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾ ರಥೋತ್ಸವ ನಡೆಯಲಿದೆ. ರಥಗಳು ಸಂಚರಿಸುವ ರಥದ ಬೀದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.


ಸಿಎಂ ಸುಗಂಧರಾಜು, ನಂಜನಗೂಡು

Related Articles

Leave a Reply

Your email address will not be published. Required fields are marked *

Back to top button