ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣಾ ಕಣಕ್ಕಿಳಿದ ಪೊಲೀಸಪ್ಪ
ನಂಜನಗೂಡು: ಸರ್ಕಾರಿ ಕೆಲಸ ಸಿಕ್ಕಿದ್ರೆ ಸಾಕಪ್ಪ ಅನ್ನೋ ಈ ಕಾಲದಲ್ಲಿ ಪೊಲೀಸ್ ಪೇದೆಯೊಬ್ಬರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ರಾಜಕೀಯದಲ್ಲಿ ಭವಿಷ್ಯ ಹುಡುಕಲು ಮುಂದಾಗಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಚಪ್ಪ ರವರೇ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ರವರ ನೂತನ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ.
ಈಗಾಗಲೇ ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಗಿಟ್ಟಿಸಿರುವ ರಾಚಪ್ಪ ರವರು ಮತದಾರರನ್ನ ಸೆಳೆಯಲು ಕ್ಷೇತ್ರದಲ್ಲಿ ಚುರುಕಾಗಿ ಓಡಾಡುತ್ತಿದ್ದಾರೆ. ಸುಮಾರು 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಚಪ್ಪ ರವರು ಮೂಲತಃ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದವರು. ಮೈಸೂರು, ಟಿ.ನರಸೀಪುರ, ಹೆಚ್.ಡಿ.ಕೋಟೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನೂ 8 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶವಿದ್ದರೂ ಜನಸೇವೆಗೆ ಮನಸ್ಸು ಹಾತೊರೆದಿದೆ.
ಜನಾರ್ಧನ ರೆಡ್ಡಿ ರವರ ಮಾತಿಗೆ ಗೌರವ ನೀಡಿ ರಾಜಕೀಯಕ್ಕೆ ಧುಮುಕಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಕೆಲಸಕ್ಕೆ ರಾಜಿನಾಮೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ರಾಜಕೀಯ ಅನುಭವ ಇಲ್ಲದಿದ್ದರೂ ನಂಜನಗೂಡಿನ ಘಟಾನುಘಟಿಗಳ ಮುಂದೆ ತೊಡೆ ತಟ್ಟಿ ರಾಜಕೀಯ ಆಟ ಆರಂಭಿಸಿದ್ದಾರೆ. ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ರಾಚಪ್ಪನವರು ಜನಾರ್ಧನ ರೆಡ್ಡಿ ರವರ ನೇತೃತ್ವದಲ್ಲಿ ಉದಯಿಸಿದ ಪಕ್ಷ ಸೇರ್ಪಡೆಯಾಗಿ ವಿಧಾನ ಸಭೆಗೆ ಆಯ್ಕೆ ಆಗಲು ಬಯಸಿದ್ದಾರೆ. ಸಧ್ಯ ಮೊದಲ ದಿನವೇ ನಂಜನಗೂಡು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹೊರಗಿನವರಿಗೆ ಹೆಚ್ಚು ಆಡಳಿತ ನಡೆಸಿದ್ದಾರೆ. ನಿಮ್ಮೂರಿನ ಮಗನಿಗೆ ಒಂದು ಅವಕಾಶ ಕಲ್ಪಿಸಿ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ..