ರಸ್ತೆ ಮೇಲೆ ಮಣ್ಣು ಸುರಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ನಂಜನಗೂಡು: ತಾಲೂಕಿನ ಮಾಡರಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಡಾಂಬರೀಕರಣಗೊಂಡಿರುವ ರಸ್ತೆ ಮೇಲಗೆ ಮಣ್ಣು ಸುರಿದಿರುವುದನ್ನು ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಬಿನಿ ಬಲದಂಡೆ ನಾಲೆಯ ಮೇಲ್ ಸೇತುವೆ ಬಳಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ ಆದರೆ ಅಧಿಕಾರಿಗಳು ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ ಸೇತುವೆ ನಿರ್ಮಾಣ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದರು ಹಾಗೂ ಸೇತುವೆಯ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು ಇದರ ಮೇಲೆ ಮಣ್ಣು ಸುರಿದು ಮುಚ್ಚಿ ಹಾಕಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತದೆ ಎಂದು ನೀರಾವರಿ ಸಹಾಯಕ ಇಂಜಿನಿಯರ್ ಅವರನ್ನು ಗ್ರಾಮಸ್ಥರು ಹಿಗ್ಗ ಮಗ ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಯುವ ಮುಖಂಡ ಕೃಷ್ಣ ಮಾತನಾಡಿ ನೀರಾವರಿ ಇಲಾಖೆಯಿಂದ ಕಬಿನಿ ಬಲದಂಡೆ ನಾಲೆಯ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು ಆದರೆ ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕಾಮಗಾರಿಯನ್ನು ನಡೆಸಲಾಗಿದೆ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಉಡಾಫೆಯಿಂದ ಉತ್ತರಿಸುತ್ತಾರೆ. ಡಾಂಬರೀಕರಣಗೊಂಡ ರಸ್ತೆಯ ಮೇಲೆ ಮಣ್ಣನ್ನು ಹಾಕಿ ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ. ವಾಹನ ಸವಾರರಿಗೆ ತುಂಬಾ ಕಿರಿಕಿರಿಯಾಗಿದ್ದು ಮಳೆ ಬಂದರಂತೂ ಜಾರಿ ಬೀಳುವ ಸಾಧ್ಯತೆಯಿದ್ದು ಅಪಘಾತಗಳು ಸಂಭವಿಸುತ್ತವೆ ಆದ್ದರಿಂದ ಸ್ಥಳೀಯ ಶಾಸಕರು ಕೂಡಲೇ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.