ಒಳ ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು; ಸಿಎಂ ಬೊಮ್ಮಾಯಿಗೆ ಅಭಿನಂದನೆ
ಬೆಂಗಳೂರು: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ಶಿಫಾರಸಿನಂತೆ ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಭಾರತ ಹಲವಾರು ಸಮುದಾಯಗಳಿಂದ ಕೂಡಿದೆ. ಜಗತ್ತಿನಲ್ಲಿ ಇಷ್ಟೊಂದು ಸಮುದಾಯ ಯಾವ ದೇಶದಲ್ಲಿಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಶಕ್ತಿ ಇದೆ, ಅವರು ಅನುಕೂಲ ಪಡೆಯುತ್ತಾರೆ. ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಇಲ್ಲದಿದ್ದರೆ ಏನಾಗುತ್ತಿತ್ತು. ಡಾ. ಜಗಜೀವನ್ ರಾಮ್ ಅವರು ಅಪಾರ ಜ್ಞಾನ ಉಳ್ಳವರಾಗಿದ್ದರು. ನಮ್ಮ ತಂದೆ ಹೇಳುತ್ತಿದ್ದರು. ಡಾ. ಜಗಜೀವನ್ ರಾಮ್ ಅವರು ಮುತ್ಸದ್ದಿಯಾಗಿದ್ದರು. ಅವರು ಹಸಿರು ಕ್ರಾಂತಿ ಮಾಡಿದರು ಎಂದರು.
ಎಡ, ಬಲ ಎನ್ನದೇ ಎಸ್ಸಿ ಸಮುದಾಯ ಈ ದೇಶದ ಒಂದು ಶಕ್ತಿ. ಸುಮಾರು 24% ಜನ ಹಿಂದುಳಿದರೆ ದೇಶ ಹೇಗೆ ಉದ್ದಾರ ಆಗುತ್ತದೆ. ಸಾಮಾಜಿಕ ನ್ಯಾಯ ಅಂತ ಇಷ್ಟು ವರ್ಷ ಹೇಳುತ್ತ ಬಂದಿದ್ದಾರೆ. ಶಿಕ್ಷಣ, ಉದ್ಯೋಗ, ಸಬಲೀಕರಣ ಈ ಮೂರು ತತ್ವ ಪಾಲಿಸಿದರೆ ಅಭಿವೃದ್ಧಿ ಸಾಧ್ಯ. ಬಹಳ ಜನ ಜೇನುಗೂಡಿಗೆ ಕೈ ಹಾಕುತ್ತಿದ್ದೀರಿ ಅಂತ ಹೇಳಿದರು. ನಾನು ನನಗೆ ಜೇನು ಕಡಿದರೂ ಚಿಂತೆಯಿಲ್ಲ. ತುಳಿತಕ್ಕೊಳಗಾದ ಸಮುದಾಯಗಳಿಗೆ ಜೇನು ಸಿಗಲಿ ಅಂತ ನಾನು ಈ ಕೆಲಸ ಮಾಡಿದ್ದೇನೆ. ಯಾರಿಗೂ ಅನ್ಯಾಯವಾದಗಂತೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ನಿಮ್ಮ ಆಶೀರ್ವಾದ ಇರಲಿ ಎಂದರು.
ಈ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ ಸುಧಾಕರ್, ಮುರುಗೇಶ ನಿರಾಣಿ ಹಾಗೂ ಮತ್ತಿತರರು ಹಾಜರಿದ್ದರು.