ವಸತಿ ಸಮುಚ್ಚಯಗಳ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ
ಬೆಂಗಳೂರು, ಜ-31: ಯಲಹಂಕ ತಾಲ್ಲೂಕಿನ ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿ ಸಮುಚ್ಚಯಗಳ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ವಸತಿ ಸಮುಚ್ಚಯಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ಬಡವರು ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು.
3 ಲಕ್ಷಕ್ಕಿಂತ ಹೆಚ್ಚು ನಿವೇಶನಗಳನ್ನು ಸೋಮಣ್ಣ ಅವರು ರಾಜ್ಯದಲ್ಲಿ ನೀಡಿರುವುದು ದಾಖಲೆ. ಪ್ರಗತಿಪರ ಚಿಂತನೆ ಮಾಡಿದಾಗ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ನಮ್ಮ ಸರ್ಕಾರ ಸಮಸ್ಯೆಯನ್ನು ಬಿಟ್ಟು ಹೋಗುವುದಿಲ್ಲ, ಪರಿಹಾರ ಕೊಟ್ಟು ಜನರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಅಂತಿಮ ಹಂತದಲ್ಲಿ 5 ಲಕ್ಷ ಮನೆಗಳು ಸೋಮಣ್ಣ ಅವರು ವಸತಿ ಸಚಿವರಾದ ನಂತರ ಗೃಹ ನಿರ್ಮಾಣಕ್ಕೆ ಒಂದು ರೂಪುರೇಷೆಯನ್ನು ನೀಡುವ ಮೂಲಕ ಬಾಕಿ ಇರುವ ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದಾರೆ. ಆಯ್ಕೆಯಾಗಿದ್ದ ಅನರ್ಹರನ್ನು ತೆಗೆಯಲು ವಿಶೇಷ ಸಾಫ್ಟವೇರ್ ಅಳವಡಿಸಿದ್ದರು. ಗ್ರಾಮೀಣ ಪ್ರದೇಶದ ಮನೆಗಳ ನಿರ್ಮಾಣಕ್ಕೆ ಕೈಗೊಂಡು ಈ ವರ್ಷ 5 ಲಕ್ಷ ಮನೆಗಳ ನಿರ್ಮಾಣ ಮಾಡಿ ಅಂತಿಮ ಹಂತಕ್ಕೆ ತಂದಿದ್ದಾರೆ.
ಸುಮಾರು 5 ಲಕ್ಷ ಮನೆಗಳ ಮಂಜೂರಾತಿ ಮಾಡಿದ್ದು, 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರದಲ್ಲಿ ಮಂಜೂರಾತಿ ನೀಡಿದ್ದು, ಫಲಾನುಭಾವಿಗಳ ಆಯ್ಕೆಯಾಗಿ ಪ್ರಗತಿಯಲ್ಲಿದೆ. ಬೆಂಗಳೂರಿನಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಬೇಕೆಂದು 7 ವರ್ಷಗಳಿಂದ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. 50 ಸಾವಿರ ಮನೆಗಳಿಗೆ ಸ್ಥಳವನ್ನು 492 ಎಕರೆ ಭೂಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಪಡೆದಿದ್ದು ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದರು.
ಕೈಗೆಟುಕುವ ದರದಲ್ಲಿ ಬಡವರಿಗೆ ಮನೆಗಳು ಸಿಗಬೇಕು ಎಂಬ ಉದ್ದೇಶ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಬಡವರಿಗೆ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ರವರು 2015-16 ರಲ್ಲಿ ಬೆಂಗಳೂರಿನ ನಗರಕ್ಕೆ 1 ಲಕ್ಷ ಮನೆಗಳನ್ನು ಕೊಟ್ಟು ಅಂದಿನ ಸರ್ಕಾರದಲ್ಲಿ 600 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿರುತ್ತಾರೆ. ನೆನೆಗುದಿಗೆ ಬಿದ್ದಂತೆ ಕೆಲಸವನ್ನು ಕೈಗೆತ್ತಿಕೊಂಡು ಈ ಮನೆಗಳಿಗೆ ಚಾಲನೆಯನ್ನು ಕೊಡತಕ್ಕಂತಹ ಕೆಲಸವನ್ನು ಇವತ್ತು ಮಾಡಿದ್ದೇವೆ. 2018-19ರಲ್ಲಿ ರಾಜ್ಯದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಒಂದು ಉಪಸಮಿತಿಯನ್ನು ರಚಿಸಿ ಆ ಸಮಿತಿಗೆ ತಾವೇ ಸ್ವತಃ ಸದಸ್ಯರಾಗಿ ಇವತ್ತು 52,000 ಮನೆಗಳು ನಿರ್ಮಾಣ ಆಗುತ್ತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರು. ಯಡಿಯೂರಪ್ಪ ರವರ ಸೂಚನೆ ಮೇರೆಗೆ ಬಸವರಾಜ ಬೊಮ್ಮಾಯಿ ರವರ ಮಾರ್ಗದರ್ಶನದಲ್ಲಿ 8 ಕ್ಷೇತ್ರಗಳಲ್ಲಿ 52,000 ಮನೆಗಳನ್ನು ಮುಕ್ತಾಯ ಹಂತಕ್ಕೆ ತಂದು, ಇಂದು 5,000 ಮನೆಗಳನ್ನು ಹಸ್ತಾಂತರಗೊಳಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಬಡವರ ಮನೆಗಳಿಗೆ ಮೂಲಭೂತ ಸೌಕರ್ಯ ಸಿಗಬೇಕು. ಕೈಗೆಟುಕುವ ದರದಲ್ಲಿ ಮನೆಗಳು ಸಿಗಬೇಕು ತಾವೇ ಸ್ವತಃ ಸಭೆಯನ್ನು ಮಾಡಿ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ರವರು ಸೂಚನೆಯನ್ನು ಕೊಟ್ಟಿರುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 6 ಲಕ್ಷ ರೂಪಾಯಿ ಹಾಗೂ ಹಿಂದುಳಿದ ವರ್ಗದವರಿಗೆ 6.5 ಲಕ್ಷ ರೂಪಾಯಿಯನ್ನು ಕಟ್ಟಿದರೆ ೪ ಚದರಕ್ಕೂ ಮೇಲ್ಪಟ್ಟು ಎಲ್ಲ ಸೌಲಭ್ಯಗಳನ್ನು ಉಳ್ಳಂತಹ ಮನೆಗಳನ್ನು ಕೊಡುವಂತಹ ಉತ್ತಮ ಕಾರ್ಯವನ್ನು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ರಾಜಧಾನಿ ಬೆಂಗಳೂರಿಗೆ ಬಳುವಳಿಯಾಗಿ ನೀಡಿದೆ. ಹೀಗಾಗಿ ಇದೊಂದು ಅವಿಸ್ಮರಣೀಯವಾದ ಕಾರ್ಯಕ್ರಮ. ಸುಳ್ಳು ಆಶ್ವಾಸನೆಗಳನ್ನು ಕೊಡಬೇಡಿ ಎಂಬ ಮೌಖಿಕ ಆದೇಶವನ್ನು ನೀಡುತ್ತಾ, ನನ್ನ ಜೀವನದಲ್ಲಿ ಹಲವಾರು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ, ಆಸರೆ ಇಲ್ಲದ ಎಲ್ಲ ವರ್ಗದವರಿಗೆ 1 ವರ್ಷ 8 ತಿಂಗಳಲ್ಲಿ ಸಾಮಾನ್ಯ ಜನರ ಹೃದಯ ಶ್ರೀಮಂತಿಕೆಯನ್ನು ಅರಿತಿದ್ದಾರೆ. ಬೊಮ್ಮಾಯಿ ಅವರು ಮುಂದಿನ ಯುವಪೀಳಿಗೆಗೆ ಆಧಾರ ಸ್ತಂಭವಾಗಿದ್ದಾರೆ. ಮೊದಲ ಹಂತದ 20 ಸಾವಿರ ಮನೆಗಳನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಅದರಲ್ಲಿ 5 ಸಾವಿರ ಮನೆಗಳನ್ನು ಇಂದು ಹಂಚಿಕೆ ಮಾಡುತ್ತಿದ್ದು, ಯಲಹಂಕದಲ್ಲಿ ಒಟ್ಟು 900 ಮನೆಗಳನ್ನು ನೀಡಲಾಗುತ್ತಿದೆ. ಹಂತಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಶಾಸಕ ಸಿದ್ದು ಸವದಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ನಾಗರಾಜ್, ವಸತಿ ಇಲಾಖೆ ಕಾರ್ಯದರ್ಶಿ ಡಾ: ಜೆ.ರವಿಶಂಕರ್, ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಪುಣ್ಯಗೌಡ, tv8 ಕನ್ನಡ, ಬೆಂಗಳೂರು