ನಿಮ್ಮ ಒಂದು ಮತದಿಂದಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ: ಶೈಲಜಾ ಸೋಮಣ್ಣ
ಬೆಂಗಳೂರು: ಜ-26; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ 74ನೇ ಭಾರತ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರೇನಹಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದ ಆವರಣದಲ್ಲಿರುವ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣರವರು ಹಾಗೂ ಕಾರ್ಯಾಧ್ಯಕ್ಷರಾದ ಡಾ.ಅರುಣ್ ಸೋಮಣ್ಣರವರು ಪುಷ್ಪನಮನ ಸಲ್ಲಿಸಿದರು. ತದನಂತರ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ಜ್ಯೋತಿಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಶೈಲಜಾ ಸೋಮಣ್ಣ ರವರು ರಾಯಣ್ಣನ ದೇಶ ಭಕ್ತಿ ಸ್ಮರಿಸುವಂತಹದ್ದು, ಸಂಗೊಳ್ಳಿ ರಾಯಣ್ಣನ ಸ್ಮರಣೆ ಮಾತ್ರವಲ್ಲದೆ ಅವರಂತೆಯೇ ದೇಶಭಕ್ತರಾಗಬೇಕು. ಎಲ್ಲರಲ್ಲೂ ದೇಶಭಕ್ತಿ ಹುಟ್ಟಬೇಕು. ಪೋಷಕರು ತಮ್ಮ ಮಕ್ಕಳಿಗೆ ಮಹಾತ್ಮರ ಜೀವನಚರಿತ್ರೆಯನ್ನು ತಿಳಿಸುವುದರ ಮೂಲಕ ಉತ್ತಮ ಮಾರ್ಗದರ್ಶನವನ್ನು ಮಾಡಬೇಕು. ಕ್ಷೇತ್ರದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಸೆಂಟರ್ ನಲ್ಲಿ ಈ ವರೆಗೂ 10,000ಕ್ಕೂ ಅಧಿಕ ಜನರು ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಯಾವುದೇ ಶುಲ್ಕವಿಲ್ಲದೆ ಉಚಿತ ಡಯಾಲಿಸಿಸ್ ಮಾಡುವುದರಿಂದ ಬಡಜನರಿಗೆ ಅನುಕೂಲವಾಗಿದೆ. ಮೂಲಭೂತ ಸೌಕರ್ಯ, ಶಾಲೆ, ಆಸ್ಪತ್ರೆ, ಹೀಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತನೆಯನ್ನು ನಡೆಸುವ ಕೆಲಸ ಆಗುತ್ತಿದೆ. ಮುಂದಿನ ತಿಂಗಳು ದಿನಾಂಕ 16 ರಂದು ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಯಾಗಲಿದೆ. ನಿಮ್ಮ ಒಂದು ಮತದಿಂದ ಗೋವಿಂದರಾಜನಗರ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಯುವ ಮುಖಂಡರು ಹಾಗೂ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಡಾ.ಅರುಣ್ ಸೋಮಣ್ಣರವರು ಮಾತನಾಡಿ 2018 ಏಪ್ರಿಲ್ 8 ರಂದು ಇದೇ ಸ್ಥಳದಲ್ಲಿ ಒಂದು ಸಭೆ ನಡೆದಿತ್ತು. ಅಂದು ಈ ಸ್ಥಳ ಹೇಗಿತ್ತು ಎಂಬುದನ್ನು ನೋಡಿದ್ದೇವೆ. ಇವತ್ತು ನೋಡಿದರೆ ಹೀಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂದು ಹೆಮ್ಮೆ ಎನಿಸುತ್ತಿದೆ. ಸುಸಜ್ಜಿತವಾಗಿ ಪುನರ್ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಫ್ಲೈ ಓವರ್, ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಹಾಗೂ ಮಾಗಡಿ ರಸ್ತೆ ಪೊಲೀಸ್ ಠಾಣೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದೇ 29 ರಂದು ಉದ್ಘಾಟನೆಗೊಳ್ಳಲಿದೆ. ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಮುನ್ನ ಡೊಳ್ಳು, ತಮಟೆ, ಕಹಳೆ ಮುಂತಾದ ಜಾನಪದ ವಾದ್ಯಗಳೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿ ಬಂತು. ವೇದಿಕೆಯಲ್ಲಿ ಭರತನಾಟ್ಯ, ಸುಗಮ ಸಂಗೀತ, ಜಾನಪದ ಗಾಯನ, ಮಕ್ಕಳ ನಾಟಕ ಕಣ್ಮನ ಸೆಳೆದವು.
ಈ ಸಂದರ್ಭದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ಗೋವಿಂದರಾಜನಗರ ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಬಿಬಿಎಂಪಿ ನಿಕಟಪೂರ್ವ ಸದಸ್ಯರಾದ ಎಂ.ರಾಮಪ್ಪ, ಡಾ.ರಾಜು, ಪಲ್ಲವಿ
ಚೆನ್ನಪ್ಪ, ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡರು, ಮುಖಂಡರಾದ ಕ್ರಾಂತಿರಾಜು, ಗಂಗಾಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.