ವಿ.ಸೋಮಣ್ಣ ರವರು 24/7 ರಾಜಕಾರಣಿ: ಈಶ್ವರಾನಂದಪುರಿ ಸ್ವಾಮೀಜಿ ಶ್ಲಾಘನೆ
ಬೆಂಗಳೂರು; ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ದೇವಾಲಯಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ತಮಟೆ, ವಾದ್ಯ, ಪೂರ್ಣಕುಂಭವನ್ನು ಹೊತ್ತ ಮಹಿಳೆಯರು ಮಾನ್ಯ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಸ್ಥಳೀಯ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರಿಗೆ ಸ್ವಾಗತವನ್ನು ಕೋರಿದರು. ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಶ್ರೀ ಶ್ರೀ ಸೌಮ್ಯನಾಥ ಮಹಾಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದರು.
ಚಂದ್ರಾ ಬಡಾವಣೆಯ ಅರುಂಧತಿ ನಗರದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ನಾಗದೇವತೆಗಳ ಶಿಲಾಪ್ರತಿಷ್ಠಾಪನೆ, ಗಂಗೊಂಡನಹಳ್ಳಿಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ನೂತನ ರಾಜಗೋಪುರ ಉದ್ಘಾಟನೆ ಹಾಗೂ ಕುಂಭಾಭಿಷೇಕ, ಚಂದ್ರಾಲೇಔಟ್ ಕನಕಭವನದ ಆವರಣದಲ್ಲಿರುವ ರೇವಣ ಸಿದ್ದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಹಾಗೂ ನಾಯಂಡಹಳ್ಳಿ ವಾರ್ಡಿನ ತಿಗಳರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮುನೇಶ್ವರ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮಾರಿಯಮ್ಮ ದೇವಾಲಯ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀಗಳ ದಿವ್ಯಸಾನಿಧ್ಯದಲ್ಲಿ ನೆರವೇರಿತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ರವರು ಮಾತನಾಡಿ ಈ ಭಾಗದ ಜನಾನುರಾಗಿ ಸಚಿವರು ವಿ.ಸೋಮಣ್ಣರವರು 24/7 ರಾಜಕಾರಣಿ, ದಿನದ 24 ಗಂಟೆಯೂ ಜನರ ಬಗ್ಗೆ ಆಲೋಚನೆ ಮಾಡುವಂತ, ದುಡಿಯುವಂತ ಏಕೈಕ ಜನಪ್ರತಿನಿಧಿ ನಮ್ಮ ಸೋಮಣ್ಣರವರು. ಇಡೀ ಕರ್ನಾಟಕ ರಾಜ್ಯದಲ್ಲಿ ಗೋವಿಂದರಾಜನಗರವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿದ್ದಾರೆ. ಒಂದು ಧರ್ಮದ ಪರ ನಿಂತವರಲ್ಲ, ಒಂದು ಜಾತಿಯ ಪರ ಕೆಲಸ ಮಾಡಿದವರಲ್ಲ. ಈದ್ಗಾ ಮೈದಾನವನ್ನು ಅಭಿವೃದ್ಧಿಪಡಿಸಿ ಮುಸಲ್ಮಾನ್ ಬಂಧುಗಳಿಗೆ ಕೊಟ್ಟಿದ್ದಾರೆ. ಜನಪ್ರತಿನಿಧಿಯಾದವರು ತಾರತಮ್ಯವನ್ನು ಮಾಡಬಾರದು. ಜನರಿಗೆ ಬೇಕಿರುವ ಮೂಲಭೂತ ಸೌಕರ್ಯ, ಶಿಕ್ಷಣ ಮತ್ತು ಆರೋಗ್ಯವನ್ನು ತಲುಪಿಸುವ ಕೆಲಸ ಆದರೆ ಸಮಾಜ ಅಭಿವೃದ್ಧಿಯಾಗುತ್ತದೆ. ಇದನ್ನು ಮನಗಂಡ ಸೋಮಣ್ಣರವರು ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇಲ್ಲಿಗೆ ಬಂದಾಗಲೆಲ್ಲ ಸಾಕಷ್ಟು ಬಾರಿ ನಾನು ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ಸಾಕಷ್ಟು ಬಡವರು ಅಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹೀಗೆ ಜನರಿಗೆ ಹತ್ತಿರವಾಗುವಂತಹ ಕೆಲಸವನ್ನು ಸೋಮಣ್ಣರವರು ಮಾಡುತ್ತಾ ಬಂದಿದ್ದಾರೆ. 72 ದೇವಾಲಯಗಳ ಅಭಿವೃದ್ಧಿ, ಸ್ಮಾರಕಗಳು, ಕನ್ನಡ ಶಾಲೆಗಳ ಅಭಿವೃದ್ಧಿಪಡಿಸಿದ್ದಾರೆ. ವಸತಿ ಸಚಿವರಾಗಿ ಲಕ್ಷಕ್ಕೂ ಅಧಿಕ ಮನೆಗಳ ಹಸ್ತಾಂತರವನ್ನು ಮಾಡಲಿದ್ದಾರೆ. ರಾಮನಬಂಟ ಹನುಮನಂತೆ ಗೋವಿಂದರಾಜನಗರ ಕ್ಷೇತ್ರದ ಬಂಟ ವಿ.ಸೋಮಣ್ಣ ರವರು, ಇಂತಹ ಜನಪ್ರತಿನಿಧಿಯನ್ನು ಪಡೆದ ಗೋವಿಂದರಾಜನಗರ ಕ್ಷೇತ್ರದ ಜನರು ಪುಣ್ಯವಂತರು ಎಂದು ಸಚಿವರ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಜಯನಗರ ಆದಿಚುಂಚನಗಿರಿ ಶಾಖಾಮಠದ ಸೌಮ್ಯನಾಥ ಸ್ವಾಮೀಜಿಯವರು ಸಾಕಷ್ಟು ದೇವಾಲಯಗಳನ್ನು ಸೋಮಣ್ಣರವರು ಅಭಿವೃದ್ಧಿಪಡಿಸಿದ್ದಾರೆ. ಪರಮಪೂಜ್ಯ ನಿರ್ಮಲಾನಂದನಾಥಸ್ವಾಮೀಜಿಯವರು ಸಹ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮುಂದಿನ ತಿಂಗಳು 16 ರಂದು ಪರಮಪೂಜ್ಯ ಡಾ.ಬಾಲಗಂಗಾಧರಸ್ವಾಮೀಜಿಯವರ ಹೆಸರಿನಲ್ಲಿ ಈ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ. ಬಡವರ ಆರೋಗ್ಯದ ಕುರಿತು ಸೋಮಣ್ಣರವರಿಗಿದ್ದ ಅಪಾರ ಕಾಳಜಿಯಿಂದ ಬೃಹತ್ ಆಸ್ಪತ್ರೆ ನೆಲೆನಿಂತಿದೆ. ಸಣ್ಣಪುಟ್ಟ ದೇವಾಲಯಗಳನ್ನು ಸಹ ಅಭಿವೃದ್ಧಿಪಡಿಸುತ್ತಾ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿ ಸೋಮಣ್ಣರವರು ಸಹಕಾರಿಯಾಗಿದ್ದಾರೆ. ಆಸ್ಪತ್ರೆಗಳ ನಿರ್ಮಾಣ, ಶಾಲೆಗಳ ಅಭಿವೃದ್ಧಿ ಹೀಗೆ ಸೋಮಣ್ಣರವರ ಸೇವಾಕಾರ್ಯ ಅಪಾರವಾದದ್ದು ಎಂದು ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಫೆ.16ರ ರಂದು 300 ಹಾಸಿಗೆಗಳ ಮಲ್ಟಿ ಸೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
ಈ ವೇಳೆ ಮಾತನಾಡಿದ ಸಚಿವರು ಈವರೆಗೂ 70ಕ್ಕೂ ಹೆಚ್ಚು ದೇವಾಲಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಗಂಗೊಂಡನಹಳ್ಳಿ, ನಾಯಂಡಹಳ್ಳಿ, ಪಂತರಪಾಳ್ಯ, ಅರುಂಧತಿನಗರದ ಜನರ ಒಳ್ಳೆಯತನಕ್ಕೆ ನಾನು ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಹಿಂದೂ-ಮುಸ್ಲಿಂ-ಕ್ರೈಸ್ತರೆಲ್ಲರೂ ಒಂದು ತಾಯಿಯ ಮಕ್ಕಳಂತೆ ಇಲ್ಲಿ ಸಹಬಾಳ್ವೆಯನ್ನು ನಡೆಸಿಕೊಂಡು ಬಂದಿದ್ದಾರೆ. ಈ ಭಾಗದ ಜನರ ಹೃದಯ ಶ್ರೀಮಂತಿಕೆ ಮತ್ತು ಸ್ವಾಭಿಮಾನ ಅಂತಹದ್ದು. ದೇವಾಲಯದ ಪೂಜಾ ಕೈಂಕರ್ಯಗಳಿಗೆ ಸೋಮಣ್ಣ ಎಂದಿಗೂ ನಿಮ್ಮ ಜೊತೆಯಲ್ಲಿರುತ್ತಾರೆ ಎಂದು ಭರವಸೆಯನ್ನು ನೀಡಿದರು. 2000 ಮಕ್ಕಳು ವ್ಯಾಸಂಗ ಮಾಡುವಂತಹ ಕಾಲೇಜು, ಮಾಗಡಿ ರಸ್ತೆ ಪೊಲೀಸ್ ಠಾಣೆ, ಒಂದು ಕಿಲೋ ಮೀಟರ್ ದೂರದ ಮೇಲು ಸೇತುವೆಯನ್ನು ಇದೇ 29 ರಂದು ಲೋಕಾರ್ಪಣೆಗೊಳಿಸಲಿದ್ದೇವೆ.
1984-85 ರಲ್ಲಿ ಮೈಸೂರು ರಸ್ತೆಯ ಮೇಲು ಸೇತುವೆಯನ್ನು ಲೋಕರ್ಪಣೆಗೊಳಿಸಿದ್ದೇವು. ಅದನ್ನು ಹೊರತು ಪಡಿಸಿದರೆ ಬೆಂಗಳೂರಿನ ಹೃದಯ ಭಾಗದಲ್ಲಿ ನಮ್ಮ ಕ್ಷೇತ್ರದಲ್ಲಿರುವ ಮತ್ತೊಂದು ಮೇಲು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ನನ್ನ ಆರಾಧ್ಯದೈವ ಪರಮಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿರವರ ಸ್ಮರಣಾರ್ಥ ಮುಂದಿನ ತಿಂಗಳು ದಿನಾಂಕ 16ರ ರಂದು 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಿದ್ದೇವೆ. ಪರಮಪೂಜ್ಯ ನಿರ್ಮಲಾನಂದನಾಥ ಶ್ರೀಗಳು, ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಯೋಗಿ ಆದಿತ್ಯನಾಥ್ ರವರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಕನಕಭವನದ ಆವರಣದಲ್ಲಿ ಹಿಂದುಳಿದ ವರ್ಗದ ಬಡವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಹಾಸ್ಟೆಲ್ ಒಂದನ್ನು ನಿರ್ಮಾಣ ಮಾಡಲಿದ್ದೇವೆ. ಇಡೀ ಬೆಂಗಳೂರಿನಲ್ಲಿ ಗೋವಿಂದರಾಜನಗರ ಕ್ಷೇತ್ರ ಮಾದರಿ ಕ್ಷೇತ್ರವೆಂಬ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹೋಮ-ಹವನ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಸಮೂಹಕ್ಕೆ ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಮೋಹನ್ ಕುಮಾರ್, ದಾಸೇಗೌಡರು, ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು.