ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳನನ್ನು ಬಂಧಿಸಿದ ತಿ.ನರಸೀಪುರ ಪೊಲೀಸರು
ತಿ. ನರಸೀಪುರ: ಪಟ್ಟಣದಲ್ಲಿ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ತಿ. ನರಸೀಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ತಿ.ನರಸೀಪುರದ ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕರಾದ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಮನೆಯ ಡಿಜಿಟಲ್ ಲಾಕರ್ ನಲ್ಲಿಟ್ಟಿದ್ದ ಸುಮಾರು 3 ಕೆಜಿ 250 ಗ್ರಾಂ ವಿವಿಧ ಮಾದರಿಯ ಚಿನ್ನದ ಒಡವೆಗಳು, 12 ಕೆಜಿ ಬೆಳ್ಳಿ ಗಟ್ಟಿ ಹಾಗೂ 30ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದರು.
ಮೈಸೂರು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರವರ ನಿರ್ದೇಶನದಂತೆ ಅಪಾರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಡಿವೈಎಸ್ಪಿ ಗೋವಿಂದರಾಜುರವರ ನೇತೃತ್ವದಲ್ಲಿ ಪಿಐ ಶ್ರೀಕಾಂತ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್, ತಿ. ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್, ಪಿಎಸ್ಐ ಜಯಪ್ರಕಾಶ್, ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.
ತಿ. ನರಸೀಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಸನದ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನ ಇನ್ನಿಬ್ಬರು ಸಹಚರರೊಂದಿಗೆ ತಿ.ನರಸೀಪುರದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಯಿಂದ 791.510 ಗ್ರಾಂ ಚಿನ್ನ ಮತ್ತು 499.260 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪೈಕಿ ಒಬ್ಬ ಹಾಸನ ಜಿಲ್ಲೆಯ ಜೈಲಿನಲ್ಲಿದ್ದು, ಉಳಿದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಿ.ಎಂ ಸುಗಂಧರಾಜು, tv8 ಕನ್ನಡ, ನಂಜನಗೂಡು