ಬಿಳಿಗಿರಿರಂಗನಾಥ ಸ್ವಾಮಿ ಚಿಕ್ಕ ಜಾತ್ರೆ ಹಿನ್ನಲೆ ಪೂರ್ವಭಾವಿ ಸಭೆ
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಚಿಕ್ಕ ಜಾತ್ರೆ ಹಿನ್ನಲೆ ಪೂರ್ವಭಾವಿ ಸಭೆ ಬೆಟ್ಟದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದ ಸಂಕ್ರಾಂತಿ ರಥೋತ್ಸವ ( ಚಿಕ್ಕ ಜಾತ್ರೆ ) ಜನವರಿ 16ರಂದು ನಡೆಯುವ ಹಿನ್ನೆಲೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಮಹೇಶ್ ರವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಬ್ರಹ್ಮ ರಥೋತ್ಸವದ ಹಿನ್ನೆಲೆ ಜನವರಿ ದಿನಾಂಕ 14 ರಿಂದ ದಿನಾಂಕ 18ರವರೆಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬರುವುದರಿಂದ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ಮಾಡಲಾಯಿತು
ಜಿಲ್ಲಾಧಿಕಾರಿಗಳು ಮಾತನಾಡಿ ರಥೋತ್ಸವಕ್ಕೆ ಜನ ಸೇರುವ ಪ್ರದೇಶಗಳಾದ ದೇವಾಲಯದ ಆವರಣ, ರಥದ ಬೀದಿ, ಕಲ್ಯಾಣಿ ಕೊಳದ ಹತ್ತಿರ, ಕಮರಿ ಆವರಣ, ದಾಸೋಹ ಆವರಣ, ಪಾರ್ಕಿಂಗ್ ವ್ಯವಸ್ಥೆ ಇರುವ ಕಡೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಪೊಲೀಸ್ ಇಲಾಖೆಗೆ ತಿಳಿಸಿದರು.ನಂತರ ದ್ವಿ ಚಕ್ರ ವಾಹನಗಳನ್ನು ಹೊರತು ಪಡಿಸಿ ಎಲ್ಲಾ ವಾಹನಗಳನ್ನು ಬಿಡುವಂತೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಗೆ ರಸ್ತೆಯ ಹಲವು ಕಡೆ ಗುಂಡಿ ಬಿದ್ದಿದ್ದು ಅದನ್ನು ಮುಚ್ಚಿಸಿ,ರಸ್ತೆಯ ಎಡ ಭಾಗ ಹಾಗೂ ಬಲಭಾಗದಲ್ಲಿನ ವಿಡಿಂಗ್ ಮಾಡಿಸಿ, ರಸ್ತೆಗಳು ಹಳ್ಳ ಕೊಳ್ಳಗಳಿಂದ ಕೂಡಿದ್ದು ಹಳ್ಳಕೊಳ್ಳ ಗಳಿಗೆ ಗ್ರಾವಲ್ ತುಂಬಿಸಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ಕೊಡಬೇಕೆಂದು ತಿಳಿಸಿದರು. ಸಾರಿಗೆ ವ್ಯವಸ್ಥೆಗೆ ಸಂಬಂಧಪಟ್ಟಂತೆ 60 ರಿಂದ 70 ಬಸ್ಸುಗಳನ್ನು ಬಿಡುವಂತೆ ಸೂಚಿಸಲಾಯಿತು. ತಾಲೂಕು ಪಂಚಾಯಿತಿಯ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ತಿಳಿಸಿದರು. ಅರಣ್ಯ ಇಲಾಖೆಗೆ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸಂಚಾರಕ್ಕೆ ನಿರ್ಬಂಧಿಸಿರುವ ಸಮಯವನ್ನು ಸಡಿಲಗೊಳಿಸಿ, ಬೆಳಿಗ್ಗೆ 6ರಿಂದ ರಾತ್ರಿ 9ಗಂಟೆವರೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ತಿಳಿಸಿದರು. ಜಾತ್ರೆಯಲ್ಲಿ ಭಕ್ತಾದಿಗಳ ಆರೋಗ್ಯ ದೃಷ್ಟಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆದು ನುರಿತ ವೈದ್ಯರು ಸಿಬ್ಬಂದಿ ತುರ್ತು ವಾಹನವನ್ನು ನಿಯೋಜಿಸಿಕೊಂಡು ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವುದು ಹಾಗೂ ರಥದ ಬೀದಿ ಕಲ್ಯಾಣಿ ಬಳಿ ಔಷಧಿ ಸಿಂಪಡಣೆ ಬಗ್ಗೆ ಕ್ರಮ ವಹಿಸಬೇಕೆಂದು ತಿಳಿಸಿದರು. ಯಾವುದೇ ಅಗ್ನಿ ಅವಘಡಗಳು ನಡೆದಂತೆ ಅರಣ್ಯ ಪ್ರದೇಶದಲ್ಲಿ ಹಾಗೂ ದೇವಾಲಯದ ಬಳಿ ಅಗ್ನಿಶಾಮಕ ವಾಹನ ಹಾಗೂ ನುರಿತ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಗ್ನಿಶಾಮಕ ದಳ ದವರಿಗೆ ತಿಳಿಸಲಾಯಿತು
ಶಾಸಕ ಎನ್ ಮಹೇಶ್ ರವರು ಮಾತನಾಡಿ 2017 ರಲ್ಲಿ ಕೊನೆಯ ಬಾರಿಗೆ ಚಿಕ್ಕ ಜಾತ್ರೆ ನಡೆದಿತ್ತು. ನಂತರ ದೇವಳ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಎರಡು ಬಾರಿ ಕೋವಿಡ್ ಸೋಂಕಿನಿಂದ ತೇರಿಗೆ ಚಾಲನೆ ಸಿಕ್ಕಿರಲಿಲ್ಲ. ಈ ಬಾರಿ ಜಾತ್ರೆ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.ಆಗಾಗಿ ಅಧಿಕಾರಿಗಳು ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮೂಲಭೂತ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದೇವಾಲಯ ನವೀಕರಣ ಸಂಪೂರ್ಣ ಮುಗಿದಿದ್ದು, ದೇವಳದ ಸುತ್ತಲೂ ನೆಲಹಾಸು ಹಾಕುವ ಕೆಲಸ ವಾರದೊಳಗೆ ಪೂರ್ಣಗೊಳ್ಳಲಿದೆ. ದಾರಿಗೆ ಅಡ್ಡವಾಗಿದ್ದ ಬಂಡೆ ತೆರವುಗೊಳಿಸಲಾಗಿದೆ. ಚಿಕ್ಕ ರಥವನ್ನು ಹೊರಗೆ ತಂದು, ಪರಿಕರಗಳನ್ನು ಪರೀಕ್ಷಿಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆ ಮಾಡಲಾಗಿದೆ. ರಥೋತ್ಸವ ಸಿದ್ಧತೆಗೆ ವೇಗ ನೀಡಲಾಗುತ್ತದೆ ಎಂದ ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಪಿ.ಶಿವಕುಮಾರ್, ಉಪ ವಿಭಾಗಾಧಿಕಾರಿಗಳಾದ ಗೀತಾ ಹುಡೇದ್, ತಹಸೀಲ್ದಾರ್ ಅನಂದಪ್ಪ ನಾಯಕ್, ಅರಣ್ಯಾಧಿಕಾರಿ ಮಹದೇವಯ್ಯ ,ಕೆ ಎಸ್ ಆರ್ ಟಿ ಸಿ ಇಲಾಖೆ ಮೋಹನ್, ಇಓ ಉಮೇಶ್, ವಾರ್ತಾಧಿಕಾರಿ ರಮೇಶ್ ಕುಮಾರ್,ಇಂಜಿನಿಯರ್ ರಾಜೇಶ್ ಮುಣಸಿ,ಅರ್ಚಕ ರವಿ,ನಿರ್ಮಿತಿ ಕೇಂದ್ರ ಇಂಜಿನಿಯರ್ ನಂದೀಶ್, ಸಬ್ ಇನ್ಸ್ಪೆಕ್ಟರ್ ಕರಿಬಸಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸಾಕಮ್ಮ,ಉಪಾಧ್ಯಕ್ಷ ಸಿ.ಡಿ.ಮಾದೇವ, ಸದಸ್ಯರಾದ ಪ್ರತಿಪ್ ಕುಮಾರ್,ರಂಗಮ್ಮಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು
ಎಸ್ ಪುಟ್ಟಸ್ವಾಮಿ ಹೊನ್ನೂರು, ಟಿವಿ 8ಕನ್ನಡ, ಯಳಂದೂರು