ನಿಮ್ಮ ಮತಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ: ಸಿಎಂ ಬೊಮ್ಮಾಯಿ
ಹಾವೇರಿ(ಶಿಗ್ಗಾಂವ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತವರು ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ರೋಡ್ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಶಿಗ್ಗಾಂವಿಯ ತೆಗ್ಗಿಹಳ್ಳಿ, ಕುರಬರಮಲ್ಲೂರು, ಹುರಳಿಕುಪ್ಪಿ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಬೆಳಿಗ್ಗೆ ತೆಗ್ಗಿಹಳ್ಳಿಯಿಂದ ಆರಂಭವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಚಾರ ಕಾರ್ಯದ ವೇಳೆ, ಅಲ್ಪಸಂಖ್ಯಾತ ಬಂಧುಗಳು ಒಕ್ಕಟ್ಟಾಗಿ ಬೆಂಬಲ ಸೂಚಿಸಿದ್ದನ್ನು ಸ್ವಾಗತಿಸಿ, ಧನ್ಯವಾದ ತಿಳಿಸಿದರು.
ಎಲ್ಲ ಸಮುದಾಯಗಳು ಒಕ್ಕಾಟ್ಟಾಗಿ ಊರಿನ ಅಭಿವೃದ್ಧಿಯನ್ನು ಎಲ್ಲರೂ ಒಂದಾಗಿ ಮಾಡೋಣ. ಯಾವುದೇ ಬೇದಭಾವವಿಲ್ಲದೇ ಅಭಿವೃದ್ಧಿ ಮಾಡಿದ್ದೇನೆ. ತೆಗ್ಗಿಹಳ್ಳಿ ಊರಿನ ಜನರ ಸ್ವಾಭಿಮಾನಿ ಜನರು. ನಾನು ಹತ್ತು ವರ್ಷದಿಂದ ನೋಡಿಕೊಂಡು ಬಂದಿದ್ದೇನೆ. ನೀವೆಲ್ಲ ಒಕ್ಕಟ್ಟಾಗಿ ಈ ಬಾರಿ ಚುನಾವಣೆ ಮಾಡೋಣ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು.
ಕುರಬರಮಲ್ಲರೂ ಗ್ರಾಮದಲ್ಲಿ ಪ್ರಚಾರ ನಡೆಸಿದ ಸಿಎಂ ಬೊಮ್ಮಾಯಿ ಅವರು, ಎಲ್ಲ ಸಮಾಜದ ಜನರ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಈ ಊರಿಗೆ ಬರಲು ಮೊದಲು ಬಹಳ ಕಷ್ಟ ಇತ್ತು. ನನ್ನ ವಿಧಾನ ಪರಿಷತ್ ಅನುದಾನ, ತಂದೆಯವರ ರಾಜ್ಯಸಭಾ ನಿಧಿ ಬಳಸಿ ಸೇತುವೆ ಮಾಡಿಸಿದ್ದೆ. ಈಗ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ ಎಂದರು.
ಕುರುಬರಮಲ್ಲೂರಿನ ರಾಜಕೀಯ ಪ್ರಜ್ಞೆ ಇರುವ ಗ್ರಾಮ. ಇದರ ಸುತ್ತಲಿನ 8ರಿಂದ 10 ಗ್ರಾಮಗಳ ಮೇಲೆ ಬೀರುತ್ತದೆ. ನಿಮ್ಮೆಲ್ಲರ ಉತ್ಸಾಹ, ಒಕ್ಕಟ್ಟು ನೋಡಿದರೆ, ದಾಖಲೆ ಪ್ರಮಾಣದ ಬೆಂಬಲ ಸಿಗುವ ವಿಶ್ವಾಸ ಬಂದಿದೆ ಎಂದರು.
ನಿಮ್ಮ ಬೆಂಬಲ, ಆಶೀರ್ವಾದದಿಂದ ಶಾಸಕನಾಗಿ, ಗೃಹಸಚಿವನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ. ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ, ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮ ಮತಕ್ಕೆ ಎಂದಿಗೂ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಶಾಸಕನಾಗಿ, ಸಚಿವನಾದ ಮೇಲೆ ನಿಮ್ಮನ್ನು ನೋಡಲು ಆಗಾಗ ಬರುತ್ತಿದ್ದೆ. ಇಲ್ಲಿ ಬಂದರೆ ನನ್ನ ಆರೋಗ್ಯವೂ ಚೆನ್ನಾಗಿರುತ್ತದೆ. ಮುಖ್ಯಮಂತ್ರಿಯಾದ ಮೇಲೆ ನಿಮ್ಮನ್ನು ಬಿಟ್ಟು ಇರಬೇಕಾಗಿದೆ. ಈ ಖೇದ ನನ್ನನ್ನು ಕಾಡುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.
2008 ರಲ್ಲಿ ಅಭಿವೃದ್ಧಿ ಹೇಗಿತ್ತು. ಈಗ ಹೇಗಿದೆ ಎನ್ನುವುದು ನಿಮ್ಮೆಲ್ಲೆ ಮುಂದಿದೆ. ಅಭಿವೃದ್ಧಿಯ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ತಾಲ್ಲೂಕನ್ನು ಕರ್ನಾಟಕದಲ್ಲಿ ನಂಬರ್ 1 ಮಾಡುವ ಶಕ್ತಿ ನಮಗೆ ಬರುತ್ತದೆ ಎಂದರು.
ಸವಣೂರು ತಾಲ್ಲೂಕಿನಲ್ಲಿ ಯುವಕರಿಗೆ ಉದ್ಯೋಗ, ವಿದ್ಯೆ, ಆರೋಗ್ಯ ಕೊಡುವುದು ಮುಖ್ಯವಾಗಿದೆ. ಈಗಾಗಲೇ 67 ಕೋಟಿ ರೂ. ಆರ್ಯುವೇದಿಕ ಆಸ್ಪತ್ರೆ ಕೊಟ್ಟಿದ್ದೇವೆ. 60 ಕೋಟಿ ರೂ.ದಲ್ಲಿ ಯುವಕರ ಕೈಗೆ ಉದ್ಯೋಗ ಕೊಡುವ, ತರಬೇತಿ ನೀಡುವ ಐಟಿಐ ಮಾಡಿದ್ದೇವೆ. 100 ಬೆಡ್ ನ ತಾಯಿ ಮಕ್ಕಳ ಆಸ್ಪತ್ರೆ ಮಾಡಿದ್ದೇವೆ. ತುಂಗಭದ್ರಾದಿಂದ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಮಾಡಿದ್ದೇನೆ. ನನ್ನ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ 438 ಕೋಟಿ ರೂ ವೆಚ್ಚದಲ್ಲಿ ಯಾರು ಮಾಡಲು ಆಗದೇ ಇರುವ ಯೋಜನೆ ಮಾಡಿದ್ದೇನೆ. ಇನ್ನು ಅನೇಕ ಯೋಜನೆಗಳನ್ನು ಮಾಡಬೇಕು ಎನ್ನುವ ಚಿಂತನೆ ನನ್ನಲ್ಲಿದೆ. ತಮ್ಮ ಆಶೀರ್ವಾದ, ಬೆಂಬಲ ಕೊಡುವ ವಿಶ್ವಾಸ ನನಗೆ ಇದೆ ಎಂದರು.
ಜಾತಿ, ಮತ ಭೇದಭಾವ ಎನ್ನದೇ ಎಲ್ಲ ಸಮುದಾಯದ ಕೆಲಸ ಮಾಡಿದ್ದೇನೆ. ಸರ್ಕಾರದ ಸವಲತ್ತು, ದೇವಸ್ಥಾನ, ಮಸೀದಿಗಳಿಗೆ ಅನುದಾನ ನೀಡಿದ್ದೇನೆ. ಕಾಯಕ ಯೋಗಿ ಯೋಜನೆಯಡಿ ಎಲ್ಲ ವರ್ಗದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಕಾಂಗ್ರೆಸ್ ಈಗ ಗ್ಯಾರಂಟಿ ಅಂತ ಹೇಳುತ್ತಿದ್ದಾರೆ. ಅವರು ಜನರನ್ನು ಯಾಮಾರಿಸುತ್ತಿದ್ದಾರೆ. ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನೀವೆಲ್ಲರೂ ಹೆಚ್ಚಿನ ಮತವನ್ನು ನೀಡಿ ಎಂದರು.