ಧಾರವಾಡ

ಭಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್ ದೇಶಬಿಟ್ಟು ಹೋಗಬೇಕಾಗುತ್ತೆ: ಸಿಎಂ ಬೊಮ್ಮಾಯಿ

ಧಾರವಾಡ( ನವಲಗುಂದ) ಹನುಮಂತನ ಭಕ್ತರು ಭಜರಂಗದಳದ ಭಜರಂಗಿಗಳು. ಅದನ್ನು ಬ್ಯಾನ್ ಮಾಡುತ್ತೆವೆ ಎಂದು ಕಾಂಗ್ರೆಸ್ ಅವರು ಹೇಳುತ್ತಿದ್ದಾರೆ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಪಕ್ಷ ದೇಶದಿಂದಲೇ ಬೇರು ಸಮೇತ ಕಿತ್ತೊಗಿಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಧಾರವಾಡದ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.

ನವಲಗುಂದ ಬಂಡಾಯದ ನಾಡು. ಸ್ವಾತಂತ್ರದ ನಂತರ ರೈತರ ಬಂಡಾಯ ಪ್ರಾರಂಭ ಆಗಿದ್ದು ನವಲಗುಂದ ಮತ್ತು ನರಗುಂದದಿಂದ. ಈ ಭಾಗದ ರೈತರು ಅತ್ಯಂತ ಶ್ರಮ ಜೀವಿಗಳು. ಹಿಂದೆ ಇಲ್ಲಿ ಮಲಪ್ರಭ ಹರಿದರೂ ಈ ಭಾಗದ ಜಮೀನಿಗೆ ನೀರು ಬಂದಿರಲಿಲ್ಲ. ನೀರು ಕೊಡದೇನೇ ರೈತರಿಗೆ ಕರ ವಸೂಲಿ ಮಾಡಿ ಪೊಲೀಸರಿಂದ ರೈತರ ಮೇಲೆ ಗುಂಡು ಹಾಕಿದವರು ಕಾಂಗ್ರೆಸ್ ಪಕ್ಷದವರು ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ಆಡಳಿತದ ಮೇಲೆ ಕಿಡಿ ಕಾರಿದರು.

ರೈತರಿಗೆ ಹೊಡೆದ ಕಾಂಗ್ರೆಸ್ ಗೆ ಮತ ಹಾಕ್ತೀರಾ?
ಮಹದಾಯಿ ನೀರನ್ನು ಮಲಪ್ರಭೆ ಮೂಲಕ ನವಲಗುಂದ ನರಗುಂದಕ್ಕೆ ತರುವುದು ನಮ್ಮ ಹೋರಾಟ ಆಗಿತ್ತು. 20 ವರ್ಷದ ಹೋರಾಟಕ್ಕೆ ಪ್ರತಿ ಬಾರಿ ಅಡ್ಡ ಹಾಕಿದ್ದು ಕಾಂಗ್ರೆಸ್ ಅವರು. ಸೋನಿಯಾಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ಮಹದಾಯಿ ನೀರು ಕೊಡುವುದಿಲ್ಲ ಅಂತ ಗೋವಾದಲ್ಲಿ ಹೇಳುತ್ತಾರೆ. ರೈತರಿಗೆ ಉಪಯೋಗವಾಗಲಿ ಎಂದು 100 ಕೋಟಿ ಖರ್ಚು ಮಾಡಿ ಕಾಲುವೆ ಮಾಡಿದರೆ ಕಾಂಗ್ರೆಸ್ ಅವರು ಅದಕ್ಕೆ ಗೋಡೆ ಕಟ್ಟಿದರು. ನ್ಯಾಯ ಕೇಳಿದ ಕಳಸಾ ಬಂಡೂರಿ ಹೋರಾಟಗಾರರಿಗೆ ಪೊಲಿಸರು ಎರಡು ವಾಹನಗಳು ಮಧ್ಯೆ ಹೋಗಲು ಬಿಟ್ಟು ದನಕ್ಕೆ ಹೊಡೆದ ಹಾಗೆ ಹೊಡೆದಿದ್ದಾರೆ. ಮನೆಗೆ ಒಳಗೆ ಹೋಗಿ ಮಹಿಳೆಯರನ್ನು ಹೊಡೆದರು. ಅಂತಹ ಸಿದ್ದರಾಮಯ್ಯ ಸರ್ಕಾರಕ್ಕೆ ಮತ ಹಾಕುತ್ತೀರಾ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.

ಕಳಸಾ ಬಂಡೂರಿಗೆ 1000 ಕೋಟಿ ಕೊಟ್ಟಿದ್ದೇವೆ
ನರೇಂದ್ರ ಮೋದಿ ಅವರು ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿದ್ದಾರೆ. ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ. ಚುನಾವಣೆ ಮುಗಿದ ಮೇಲೆ ಕೆಲಸ ಪ್ರಾರಂಭ ಆಗುತ್ತದೆ. ಕಾಂಗ್ರೆಸ್ ಅವರು ಇದಕ್ಕೆ 500 ಕೋಟಿ ಕೊಡೋದಾಗಿ ಹೇಳಿದ್ದಾರೆ. ಆದರೆ ನಾನು ಈಗಾಗಲೇ ಬಜೆಟ್ ನಲ್ಲಿ 1000 ಕೋಟಿ ಮೀಸಲು ಇರಿಸಿದ್ದೇನೆ. ಜತೆಗೆ 2 ವರ್ಷದಲ್ಲಿ ಕಾಮಗಾರಿ ಮುಗಿಸುತ್ತೀವಿ. ಕಾಂಗ್ರೆಸ್ ಭರವಸೆಗಳನ್ನು ನೀಡುತ್ತಿದ್ದಾರೆ. ಅವರ ಗ್ಯಾರಂಟಿಗಳು ಮೇ 10 ರ ವರೆಗೆ ಮಾತ್ರ. ಆಮೇಲೆ ಅದು ಗಳಗಂಟಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ಅವರು ಭಜರಂಗ ದಳ ಬ್ಯಾನ್ ಮಾಡ್ತಾರಂತೆ
ಸಾಮಾಜಿಕ ನ್ಯಾಯ ಎನ್ನುತ್ತಿದ್ದ ಕಾಂಗ್ರೆಸ್ ಅವರು ಮೀಸಲಾತಿ ಹೆಚ್ಚಳದ ನಮ್ಮ ನಿರ್ಧಾರವನ್ನು ಸಂವಿಧಾನ ವಿರೋಧಿ ಎಂದು ಹೇಳಿದರು. ನಾವು ಎಲ್ಲ ಸಮಾಜಗಳಿಗೆ ನ್ಯಾಯ ಕೊಟ್ಟಿದ್ದೀವಿ. ಆದರೆ ಅವರು ಹಿಂಬಾಗಿಲ ಮೂಲಕ ಕೋರ್ಟ್ ಗೆ ಹೋಗಿದ್ದಾರೆ. ಈಗ ಕಾಂಗ್ರೆಸ್ ಅವರು ಬಜರಂಗ ದಳ ನಿಷೇಧ ಮಾಡುವುದಾಗಿ ಹೇಳುತ್ತಾರೆ. ದೇಶದ್ರೋಹ, ಭಯೋತ್ಪಾದನೆ ಮಾಡುವ ಪಿಎಫ್ಐ ಜೊತೆ ಭಜರಂಗದಳವನ್ನು ಸೇರಿಸಿದ್ದಾರೆ. ನಮ್ಮ ಪ್ರಧಾನಿ ಮೋದಿ ಈಗಾಗಲೇ ಪಿಎಫ್ಐ ಬ್ಯಾನ್ ಮಾಡಿದ್ದಾರೆ. ನಮ್ಮ ಪರಂಪರೆ, ನಮ್ಮ ಧರ್ಮ, ನಮ್ಮ ಇತಿಹಾಸವನ್ನು ಗಟ್ಟಿಕೊಳಿಸಿರುವುದು ಭಜರಂಗದಳ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಕಾಂಗ್ರೆಸ್ ಪಕ್ಷ ದೇಶದಿಂದಲೇ ಬೇರು ಸಮೇತ ಕಿತ್ತೊಗೀತಾರೆ. ಉತ್ತರದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದೇವಸ್ಥಾನ ನಿರ್ಮಾಣ ಆಗ್ತಿದ್ರೆ, ದಕ್ಷಿಣದ ಅಂಜನಾದ್ರಿಯಲ್ಲಿ ಆಂಜನೇಯ ಸ್ವಾಮಿ ಅಭಿವೃದ್ಧಿ ಆಗ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸಬ್ ಕೆ ಸಾಥ್, ಸಬ್ ಕೆ ವಿಕಾಸ್ ಎನ್ನುವುದು ನಮ್ಮ ಸರ್ಕಾರ ಮಾಡುತ್ತಿದೆ. ಅದನ್ನು ನೀವು ಮನೆಮನೆಗೆ ಹೋಗಿ ಜನರಿಗೆ ತಿಳಿಸಬೇಕು. ರಾಜಕಾರಣದಲ್ಲಿ ಜನ ಬಹಳ ಮಾತನಾಡುತ್ತಾರೆ. ಆದ್ರೆ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಏನನ್ನೂ ಮಾತನಾಡದೇ ಕೆಲಸ ಮಾಡಿ ತೋರಿಸುವ ವ್ಯಕ್ತಿ. ತಾಲ್ಲೂಕಿನ ಅಭಿವೃದ್ಧಿಗೆ ಶಂಕರ ಪಾಟೀಲ್ ಮುನೇನಕೊಪ್ಪ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button