ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಸಿಎಂ ಬೊಮ್ಮಾಯಿ
ಹಾವೇರಿ: ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ. ಅದರ ಶ್ರೇಯಸ್ಸು ನಮಗೆ ಸಿಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾಂವಿಯಲ್ಲಿ ರೋಡ್ ಶೋ ನಡೆಸಿದ ಬಳಿಕ ಅವರು ಜನರನ್ನುದ್ದೇಶಿಸಿ ಮಾತನಾಡಿದರು. ನಮ್ಮ ಕೆಲಸಗಳ ಮೂಲಕ ನಾವು ಜನರ ಬಳಿ ಮತ ಕೇಳುತ್ತಿದ್ದೇವೆ. ಪ್ರತಿ ವರ್ಷ ಕಿಸಾನ್ ಸಮ್ಮಾನ್ ಯೋಜನೆ ಅಡಿ 22 ಸಾವಿರ ರೂಪಾಯಿ ಹಣ ರೈತರ ಅಕೌಂಟ್ ಗೆ ಬಂದಿದೆ. ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುವಷ್ಟು ಹಣ, ರಾಜ್ಯ ಸರ್ಕಾರದಿಂದ ನೀಡುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾದ ಮೇಲೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಶಿಗ್ಗಾಂವ- ಸವಣೂರಿನ 8 ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ದೊರೆತಿದೆ ಎಂದರು.
ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯ ಅಂತ ಹೇಳುತ್ತಿದ್ದಾರೆ. ಆದರೆ, ನಾನು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ದೀನ ದಲಿತರಿಗೆ ನ್ಯಾಯ ಕೊಡಬೇಕಾದರೆ ಜೇನುಗೂಡಿಗೆ ಕೈ ಹಾಕಲೇಬೇಕು. ನಾನು ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನಾಡಿನಿಂದ ಬಂದವನಿದ್ದೇನೆ. ಹೀಗಾಗಿ ಜೇನು ಕಡಿದರೂ ಆ ಸಮುದಾಯಗಳಿಗೆ ನ್ಯಾಯ ಕೊಡಿಸಿದ್ದೇನೆ ಎಂದರು.
ಕಾಂಗ್ರೆಸ್ ನವರು ಗ್ಯಾರೆಂಟಿ ಯೋಜನೆಗಳ ಭರವಸೆ ನೀಡುತ್ತಿದ್ದಾರೆ. ಚುನಾವಣೆಗೋಸ್ಕರ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದಾರೆ. ಚುನಾವಣೆವರೆಗೂ ಮಾತ್ರ ಅವರ ಗ್ಯಾರೆಂಟಿ ನಂತರ ಅದು ಗಳಗಂಟಿಯಾಗಲಿದೆ ಎಂದರು.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ಅತ್ತಿಗೇರಿ ಗ್ರಾಮದ ಪ್ರತಿ ಮನೆಗೆ ನೀರು ಒದಗಿಸಲಾಗುವುದು. ಬೀರಲಿಂಗೇಶ್ವರ ದೇವಸ್ತಾನವನ್ನು ನಾನು ಚುನಾವಣೆಯಲ್ಲಿ ಆರಿಸಿ ಬಂದ ಮೂರು ತಿಂಗಳಲ್ಲಿ ಮಾಡಿಕೊಡಿತ್ತೇನೆ ಎಂದು ಭರವಸೆ ನೀಡಿದರು.
ಇನ್ನೂ ಸವಣೂರು ತಾಲೂಕಿನ ಕಾರಡಗಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಸಿಎಂ, ಕಾರಡಗಿ ನಮ್ಮ ತಂದೆಯ ಜನ್ಮಭೂಮಿ. ನಮ್ಮ ತಂದೆಗೆ ಹಾಗೂ ನನಗೆ ಕಾರಡಗಿ ವೀರಭದ್ರೇಶ್ವರನ ಆಶೀರ್ವಾದ ಇದೆ.
ನಾನು ಶಾಸಕನಾದ ಮೇಲೆ ಕಾರಡಗಿಯಲ್ಲಿ ಯಾವುದೇ ಸಾಮರಸ್ಯ ಕದಡುವ ಘಟನೆ ಆಗಿಲ್ಲ. ಯಾರೂ ಹುಟ್ಟುವಾಗ ಕೇಳಿಕೊಂಡು ಹುಟ್ಟಿಲ್ಲ. ಜೀವನ ಅತ್ಯಂತ ಮುಖ್ಯ. ಎಲ್ಲರೂ ಒಟ್ಟಾಗಿ ಸೇರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ. ನಿಮ್ಮ ಯಾವುದೇ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ ಎಂದರು.
ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಸಿಎಂ ಬೊಮ್ಮಾಯಿ ಅವರು, ಮುಖ್ಯಮಂತ್ರಿಯಾಗಿ ನನಗೆ ಸಿಕ್ಕ ಗೌರವ ನಿಮಗೆ ಸಿಕ್ಕ ಗೌರವ. ನಾನು ಸಿಎಂ ಆಗಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಕಿಸಾನ್ ಸಮ್ಮಾನ್ ಯೊಜನೆ ಅಡಿ ರೈತರಿಗೆ ಅನುದಾನ ದೊರೆತಿದೆ. ಪ್ರತಿ ಕ್ಷೇತ್ರದಲ್ಲಿ 30 ರಿಂದ 40 ಸಾವಿರ ಜನರು ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ.
ಮೇ 10 ಕ್ಕೆ ಬಿಜೆಪಿಗೆ ಮತ ನೀಡಿ ಮೇ 13 ಕ್ಕೆ ವಿಜಯೋತ್ಸವ ಆಚರಿಸೋಣ ಎಂದರು.