ಚುನಾವಣಾ ಅಭ್ಯರ್ಥಿಗಳಿಗೆ ಹಕ್ಕೋತ್ತಾಯ ಮಂಡಿಸಿದ ರೈತರು
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹಕ್ಕೊತ್ತಾಯ ಮಂಡನೆ ಮಾಡಲಾಯಿತು. ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರಾಜಕೀಯ ಮುಖಂಡರೊಂದಿಗೆ ರೈತ, ದಲಿತ ಮುಖಂಡರ ಮುಖಾಮುಖಿ ಹಾಗೂ ಹಕ್ಕು ಮಂಡನೆಯನ್ನು ಮುಂದಿನ ಚುನಾವಣೆಗೆ ರೈತ ಸಮುದಾಯದ ನಿಲುವಿನ ಘೋಷಣೆಯನ್ನು ಮಾಡಲಾಯಿತು.
ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಬರುವ ಸರ್ಕಾರದಲ್ಲಿ ನಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಬೇಕು ಎಂದು ರೈತರು ಒತ್ತಾಯಿಸಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ರೈತರ ಪರವಾಗಿ ಸಹಿ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿ ಭರವಸೆ ನೀಡಿದ್ದಾರೆ.
ರೈತ ಸಂಘಟನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ರೈತ, ದಲಿತ ಹಾಗೂ ಜನರ ಪರವಾಗಿ ನಾವು ನಿಂತಿದ್ದೇವೆ. ಬಿಜೆಪಿ ಸರ್ಕಾರ ಮೂರು ಕೃಷಿ ಮಸೂದೆ ಕಾಯ್ದೆಗಳನ್ನು ಜಾರಿಗೆ ತಂದಿರುವುದನ್ನು ರದ್ದುಗೊಳಿಸಬೇಕು. ರೈತರ ಎಲ್ಲ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆಯನ್ನು ಖಾತ್ರಿ ಗೊಳಿಸಬೇಕು. ವಿದ್ಯುತ್ ಖಾಸಗಿಕರಣವನ್ನು ನಾವು ವಿರೋಧಿಸುತ್ತೇವೆ. ಪ್ರಾಣಿಗಳಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು. ನಂದಿನಿಯನ್ನು ಅಮೂಲ್ ನೊಂದಿಗೆ ವಿಲೀನ ಮಾಡಿರುವುದನ್ನು ನಿಲ್ಲಿಸಬೇಕು. ನಿರುದ್ಯೋಗಿ ಯುವಕ -ಯುವತಿಯರಿಗೆ ಕಾಯಂ ಉದ್ಯೋಗ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನು ನೀಡಬೇಕು. ದಲಿತರ ಮಕ್ಕಳ ಸ್ಕಾಲರ್ಶಿಪ್ ಅನ್ನು ಹೆಚ್ಚಿಸಿ ನಿಂತು ಹೋಗಿರುವ ಸ್ಕಾಲರ್ಶಿಪ್ ಅನ್ನು ಮರುಪಾವತಿ ಮಾಡಲು ಕ್ರಮವಹಿಸಬೇಕು. ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಬಿಲ್ಲನ್ನು ಮನ್ನಾಮಾಡಿ ಉಚಿತ ವಿದ್ಯುತ್ ಸರಬರಾಜು ಮಾಡಬೇಕು. ಈಗೇ 22 ಅಂಶಗಳನ್ನು ಒಳಗೊಂಡ ಹಕ್ಕೋತ್ತಾಯಗಳನ್ನು ಮುಂಬರುವ ಸರ್ಕಾರದಲ್ಲಿ ಇದನ್ನು ಬಗೆಹರಿಸಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ರೈತ ಸಂಘಟನೆಯ ತಾಲೂಕು ಅಧ್ಯಕ್ಷ ಸತೀಶ್ ರಾವ್, ಪ್ರಧಾನ ಕಾರ್ಯದರ್ಶಿ ರಘು, ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ಮಂಜುಕಿರಣ್ ,ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿ ನಾಗಭೂಷಣ್, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಸಂಚಾಲಕ ಮಂಜುನಾಥ್, ಮಹದೇವಸ್ವಾಮಿ, ಶ್ರೀಧರ್, ಸೇರಿದಂತೆ ರೈತರು ಭಾಗವಹಿಸಿದರು.