ಧಾರವಾಡ

ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ: ಅಮಿತ್ ಶಾ ವಿಶ್ವಾಸ

ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಸ್ಥಿರತೆ ಮತ್ತು ನೂತನ ಕರ್ನಾಟಕದ ದೂರದೃಷ್ಟಿಯೊಂದಿಗೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮದು ನರೇಂದ್ರ ಮೋದಿಜಿ ಅವರ ನೇತೃತ್ವದ ಅಭಿವೃದ್ಧಿಪರ ಡಬಲ್ ಎಂಜಿನ್ ಸರಕಾರ. ಕಾಂಗ್ರೆಸ್‍ನದು ರಿವರ್ಸ್ ಗೇರ್ ಸರಕಾರ ಎಂದು ಅವರು ನುಡಿದರು.


ಕರ್ನಾಟಕದ ಬಡವರು, ಜನರೆಲ್ಲರಿಗೆ ನೀಡಿದ ಸೌಕರ್ಯಗಳು ಮತ್ತು ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಆಗಿರುವ ಸಾಧನೆಯನ್ನು ಜನರ ಮುಂದಿಟ್ಟು ನಾವು ಚುನಾವಣೆ ಎದುರಿಸಲಿದ್ದೇವೆ. ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ತುಷ್ಟೀಕರಣ ನೀತಿಯಡಿ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸಿ ಎಸ್‍ಸಿ, ಎಸ್‍ಟಿ, ಒಬಿಸಿ ವರ್ಗದಡಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕೊಟ್ಟು ದೀರ್ಘಕಾಲದ ಸಾಮಾಜಿಕ ನ್ಯಾಯದ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ ಎಂದು ವಿವರಿಸಿದರು.
ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಅಸಾಂವಿಧಾನಿಕ. ಮತಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿತ್ತು. ಕಾಂಗ್ರೆಸ್ ಪಕ್ಷವು ಕರ್ನಾಟಕಕ್ಕಾಗಿ ಜನಕಲ್ಯಾಣ ಅಥವಾ ಅಭಿವೃದ್ಧಿಯನ್ನು ಬಯಸುತ್ತಿಲ್ಲ. ಅದು ಕರ್ನಾಟಕವನ್ನು ತನ್ನ ಎಟಿಎಂ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಅವರು ತಿಳಿಸಿದರು.


ಜೆಡಿಎಸ್ ಕೂಡ ಒಂದು ಕುಟುಂಬದ ಪಕ್ಷ. ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣೆಗೆ ಹೋಗುವ ಜೆಡಿಎಸ್ ಪಕ್ಷವು ಚುನಾವಣೆಯ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷದ ಜೊತೆ ತೆರಳುತ್ತದೆ. ಕರ್ನಾಟಕದ ಜನತೆ ಬಿಜೆಪಿಯ ಪೂರ್ಣ ಬಹುಮತದ ಸ್ಥಿರ ಸರಕಾರವನ್ನು ಚುನಾಯಿಸಬೇಕು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.
ಸುರಕ್ಷಿತ ಕರ್ನಾಟಕವನ್ನು ಕೇವಲ ಬಿಜೆಪಿ ಮಾತ್ರ ನೀಡಬಲ್ಲದು ಎಂದ ಅವರು, ನರೇಂದ್ರ ಮೋದಿಯವರ ಸರಕಾರವು ಪಿಎಫ್‍ಐ ಬ್ಯಾನ್ ಮಾಡಿದೆ. ಎನ್‍ಐಎಯು ಪಿಎಫ್‍ಐಯ ಚಟುವಟಿಕೆಗಳ ಬಗ್ಗೆ ತನಿಖೆ ಮಾಡುತ್ತಿದೆ. ಈ ಮೂಲಕ ರಾಜ್ಯವನ್ನು ಸುರಕ್ಷಿತವಾಗಿ ಇಟ್ಟಿದೆ. ಇದನ್ನು ಜನತೆ ಗಮನಿಸಲಿದ್ದಾರೆ ಎಂದು ನುಡಿದರು.


ಕಾಂಗ್ರೆಸ್ ಸರಕಾರ ಇದ್ದಾಗ ಪಿಎಫ್‍ಐ ಸೇರಿದವರಿಗೆ ವಿಶೇóಷ ಸ್ಥಾನಮಾನ ಕೊಡಲಾಗುತ್ತಿತ್ತು. ಪಿಎಫ್‍ಐ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮೇಲಿದ್ದ ಮೊಕದ್ದಮೆಗಳನ್ನು ರದ್ದು ಮಾಡಲಾಗಿತ್ತು ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ಸದಾ ಕಾಲ ಕಿತ್ತೂರು ಕರ್ನಾಟಕದ ಅವಮಾನ ಮಾಡುತ್ತಲೇ ಬಂದಿತ್ತು ಎಂದ ಅವರು, ಕೇಂದ್ರದಲ್ಲಿ ಯುಪಿಎ ಸರಕಾರ ಮತ್ತು ಗೋವಾದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಕಾಂಗ್ರೆಸ್ ಪಕ್ಷವು ಮಹದಾಯಿ ವಿವಾದವನ್ನು ಪರಿಹರಿಸಲು ಗಮನ ಕೊಡಲಿಲ್ಲ ಎಂದು ಟೀಕಿಸಿದರು. ಮಹದಾಯಿ ಹೋರಾಟಗಾರರ ಮೇಲೆ ಕಾಂಗ್ರೆಸ್ ಸರಕಾರವು ಗುಂಡು ಹಾಕಿತ್ತು ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ನಮ್ಮ ಕೇಂದ್ರ ಸರಕಾರವು 5300 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಕಳಸಾ ಬಂಡೂರಿಗೆ ಒಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಕರ್ನಾಟಕದ 7 ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಇದರಲ್ಲಿ ಸೇರಿವೆ ಎಂದು ತಿಳಿಸಿದರು.


ವಿವಿಧ ರೈಲ್ವೆ ಯೋಜನೆಗಳ ಅನುಷ್ಠಾನ, ವಿಮಾನನಿಲ್ದಾಣ ಕಾಮಗಾರಿ, ರಸ್ತೆ ಕಾಮಗಾರಿಗಳ ಮೂಲಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಡಬಲ್ ಎಂಜಿನ್ ಸರಕಾರ ಶ್ರಮಿಸಿದೆ. ಇದನ್ನು ಗಮನಿಸಿ ಜನತೆ ಬಿಜೆಪಿಯನ್ನೇ ಚುನಾಯಿಸಲಿದ್ದಾರೆ ಎಂದು ನುಡಿದರು. ಕರ್ನಾಟಕಕ್ಕೆ ಹೆಚ್ಚು ಅನುದಾನವನ್ನು ಕೊಡಲಾಗಿದೆ. ತೆರಿಗೆ ವಾಪಸಾತಿಯಲ್ಲೂ ಗಣನೀಯ ಹೆಚ್ಚಳ ಸಾಧಿಸಲಾಗಿದೆ ಎಂದರು. ಶಿವಮೊಗ್ಗ ಮತ್ತು ಕಲಬುರ್ಗಿಗಳಲ್ಲಿ ವಿಮಾನನಿಲ್ದಾಣ ಉದ್ಘಾಟನೆ ಆಗಿದೆ. ವಿಜಯಪುರ, ರಾಯಚೂರು ಮತ್ತಿತರ ಕಡೆಗಳಲ್ಲಿ ವಿಮಾನನಿಲ್ದಾಣ ನಿರ್ಮಾಣ ಕಾರ್ಯ ನಡೆದಿದೆ ಎಂದ ಅವರು, ಚಾಮರಾಜನಗರ, ಬೀದರ್, ಹಾವೇರಿ, ಕೊಪ್ಪಳ ಮತ್ತಿತರ ಕಡೆ ಒಟ್ಟು 7 ಮಾದರಿ ವಿಶ್ವವಿದ್ಯಾಲಯಗಳನ್ನು ಮಂಜೂರು ಮಾಡಿದ್ದರ ಕುರಿತು ಗಮನ ಸೆಳೆದರು.


ಸುರಕ್ಷಿತ, ಅಭಿವೃದ್ಧಿಶೀಲ ಕರ್ನಾಟಕಕ್ಕಾಗಿ ಬಿಜೆಪಿಗೆ ಬಹುಮತ ಕೊಡಲು ಅವರು ವಿನಂತಿಸಿದರು. ಡಬಲ್ ಎಂಜಿನ್ ಸರಕಾರ ಮಾತ್ರ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯ ಎಂದು ಅವರು ನುಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತಿತರ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button