ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಾ.ಭಾರತಿ ಶಂಕರ್ ನಾಮಪತ್ರ ಸಲ್ಲಿಕೆ
ವರುಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ಡಾ.ಭಾರತಿ ಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ನಂಚಿನಗೂಡು ನಗರದ ತಾಲೂಕು ಪಂಚಾಯಿತಿ ಕಚೇರಿಗೆ ಕುಟುಂಬ ಸಮೇತ ಆಗಮಿಸಿ ವರುಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಾ. ಭಾರತಿ ಶಂಕರ್ ರವರು ಚುನಾವಣಾ ಅಧಿಕಾರಿ ಗೌರವ ಶೆಟ್ಟಿ ಕುಮಾರ್ ಅವರಿಗೆ ನಾಮ ನಿರ್ದೇಶನ ಮಾಡಿದರು.
ಬಳಿಕ ಮಾತನಾಡಿದ ಅವರು, ಕ್ಷೇತ್ರಕ್ಕೆ ನಾನೇ ಹಳೇ ರಾಜಕಾರಣಿ, ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಗೊತ್ತಿದೆ. ಮತದಾರರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಬರುವುದಕ್ಕಿಂತ ಮುಂಚೆ ನಾನೇ ಕ್ಷೇತ್ರದಲ್ಲಿ ಜನರ ಪ್ರೀತಿಗಳಿಸಿದ್ದೇನೆ. ಕುಮಾರಸ್ವಾಮಿ ಅವರು ನಂಜನಗೂಡು ಕ್ಷೇತ್ರಕ್ಕೆ ಅಭ್ಯರ್ಥಿ ಬೇಡ ಎಂದು ನಿರ್ಧಾರ ಮಾಡಿ ಮಾನವೀಯತೆ ಮರೆದಿದ್ದಾರೆ. ದರ್ಶನ್ ಧ್ರುವನಾರಾಯಣ್ ರವರನ್ನು ಗೆಲ್ಲಿಸುವಂತೆ ಕರೆ ನೀಡಿದ್ದಾರೆ ಇಂತಹ ಮಾನವೀಯತೆ ಗುಣಗಳನ್ನು ಕುಮಾರಸ್ವಾಮಿ ಅವರಲ್ಲಿ ಕಂಡಿದ್ದೇವೆ.
ಸೋಮಣ್ಣ ಹೊರಗಿನಿಂದ ಬಂದವರು. ಸಿದ್ದರಾಮಯ್ಯ ಮತ್ತು ನನ್ನ ಗೆಲುವಿಗೆ ಜನರು ತೀರ್ಮಾನ ಮಾಡುತ್ತಾರೆ. ಈ ಬಾರಿ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಪ್ರಾದೇಶಿಕ ಪಕ್ಷಕ್ಕೆ ಮಾನ್ಯತೆ ನೀಡಿ ಜೆಡಿಎಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ರಾಜ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ನನಗೆ ಈ ಬಾರಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ವಕೀಲ ಪಾಲಾಕ್ಷ, ಜೆಡಿಎಸ್ ವಕ್ತಾರ ತಾಯೂರು ಪ್ರಕಾಶ್, ಡಾ.ಸನಾತ್ ಕುಮಾರಿ, ಸುಪ್ರಿಯ ಶಂಕರ್, ರವೀಂದ್ರ ಕುಮಾರ್ ಅರುಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದರು.