ಆರೋಗ್ಯ

ಬೇಸಿಗೆಯಲ್ಲಿ ಹೀಗಿರಲಿ ಆಹಾರ ಕ್ರಮ

ಬೇಸಿಗೆಯಲ್ಲಿ ನಮ್ಮ ದೇಹದ ಉಷ್ಣಾಂಶ ಬಹಳ ಹೆಚ್ಚುತ್ತದೆ. ಈ ಹೆಚ್ಚಾದ ಉಷ್ಣದಿಂದ ಇನ್ನೂ ತೊಂದರೆಗಳು ಹೆಚ್ಚುತ್ತವೆ. ಬರುಬರುತ್ತಾ ಬಿಸಿ ಹೆಚ್ಚಾದಂತೆ ಬೇಗೆ ಅನುಭವಿಸುವ ಬದಲು ಮುಂಚಿನಿಂದಲೇ ಕೆಲವು ಟಿಪ್ಸ್ ಅನುಸರಿಸುವುದು ಜಾಣತನ..

ಎಳನೀರು

ಎಳನೀರು ನಮಗೆ ಕಲ್ಪವೃಕ್ಷ ಕೊಟ್ಟ ವರ. ಇದಕ್ಕೆ ಸಾಟಿ ಇನ್ನೂ ಯಾವುದಿಲ್ಲ. ದಿಣ್ನಕ್ಕೆ ಒಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಎಳನೀರನ್ನು ತಪ್ಪದೆ ಕುಡಿಯಿರಿ. ಎಳನೀರು ದೇಹಕ್ಕೆ ತಂಪು ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ದೇಹದ ನೀರಿನಂಶವನ್ನು ಕಾಪಾಡುತ್ತದೆ. ಎಳನೀರನ್ನು ದೊಡ್ಡವರೇ ಅಲ್ಲದೆ ಚಿಕ್ಕ ಮಕ್ಕಳು ಕೂಡ ಇಷ್ಟಪಟ್ಟು ಸೇವಿಸುತ್ತಾರೆ. ಏಳನೀರಿನಲ್ಲಿರುವ ಖನಿಜಾಂಶಗಳು ನಮಗೆ ಆಗುವ ಸುಸ್ತನ್ನು ಕೂಡ ಕಡಿಮೆ ಮಾಡುತ್ತವೆ. ನೀವು ಎಷ್ಟೇ ಅವಸರದಲ್ಲಿ ಇರಲಿ, ಕಛೇರಿಗೆ ಹೋಗುವಾಗ, ಅಥವಾ ಹೊರಗಡೆ ಶಾಪಿಂಗ್ ಅಥವಾ ಇನ್ನೇನಾದರೂ ವಿಷಯವಾಗಿ ಸುತ್ತುವಾಗ ದಾರಿಯಲ್ಲೊಂದು ಐದು ನಿಮಿಷ ವಿನಿಯೋಗಿಸಿ ಎಳನೀರನ್ನು ತಪ್ಪದೆ ಕುಡಿಯಿರಿ

ನಿಂಬೆಹಣ್ಣು

ನಿಂಬೆಹಣ್ಣು ಬೇಸಿಗೆಯಲ್ಲಿ ಬಹು ಉಪಯೋಗಿ. ಬಹಳಷ್ಟು ವಿಧದಲ್ಲಿ ಈ ನಿಂಬೆಹಣ್ಣನ್ನು ಸೇವಿಸಬಹುದು. ನಿಂಬೆ ಜ್ಯೂಸ್ ತಯಾರಿಸುವುದು ಸುಲಭ ಹಾಗೂ ರುಚಿಕರ ಕೂಡ. ಇನ್ನೂ ನಮ್ಮೆಲ್ಲರ ನೆಚ್ಚಿನ ಚಿತ್ರಾನ್ನ ಹೇಳಬೇಕೆ? ನಿಂಬೆಹಣ್ಣು ವಿಟಮಿನ್ ಸೀ ಆಗರ. ಇದು ದೇಹಕ್ಕೆ ಬಹಳಷ್ಟು ತಂಪು ನೀಡುತ್ತದೆ. ದಿನನಿತ್ಯ ಒಂದಲ್ಲ ಒಂದು ರೀತಿ ನಿಂಬೆ ಹಣ್ಣನು ಸೇವಿಸಿರಿ ಹಾಗೂ ತಂಪಾಗಿರಿ.

ಕಲ್ಲಂಗಡಿ

ಬೇಸಿಗೆ ಬಂತೆಂದರೆ ಪ್ರಕೃತಿ ನಮಗೆ ಕೂಡುವ ಕೊಡುಗೆ ಈ ಕಲ್ಲಂಗಡಿ. ಕಲ್ಲಂಗಡಿ ಹಣ್ಣು ತನ್ನ ನೀರಿನಂಶದಿಂದ ಬೇಸಿಗೆಯಲ್ಲಿ ನಮ್ಮ ಮಿತ್ರ. ಕಲ್ಲಂಗಡಿ ಹಣ್ಣಿನಲ್ಲಿ ಬಹಳಷ್ಟು ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್ ಗಳು ಸಹ ಇದ್ದಾವೆ. ಇದರ ಕ್ಯಾಲೋರಿ ಅಂಶ ಬಹು ಕಡಿಮೆ. ಹೀಗಾಗಿ ಇದು ನಮ್ಮ ದೇಹದ ತೂಕ ನಿರ್ವಹಿಸಲು ಕೂಡ ಸಹಕಾರಿ. ಕಲ್ಲಂಗಡಿ ತಿನ್ನಲು ರುಚಿ. ಮಕ್ಕಳಿಗೆ ಅವರ ಲಂಚ್ ಬಾಕ್ಸ್ ನಲ್ಲಿ ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಹಾಕಿ ಕಳಿಸಿ. ಕಛೇರಿಗೆ ಹೋಗುವವರು ತಮ್ಮ ಡೆಸ್ಕ್ನಲ್ಲೇ ಸುಲಭವಾಗಿ ತಿನ್ನಬಹುದು. ಹೀಗಾಗಿ ಮನೆಯಲ್ಲೇ ಕಟ್ ಮಾಡಿ ನೀವು ಸುಲಭವಾಗಿ ಕೊಂಡೊಯ್ಯಿರಿ.

ಮಜ್ಜಿಗೆ

ಮಜ್ಜಿಗೆ ಇಲ್ಲದೆ ನಮ್ಮ ದಕ್ಷಿಣ ಭಾರತ ಉಂಟೆ. ಮಜ್ಜಿಗೆಯ ಬಗ್ಗೆ ಹೆಚ್ಚಾಗಿ ಹೇಳುವುದೇನು ಇಲ್ಲ. ಮನೆಯಲ್ಲಿ ಹಿರಿಯರು ಮಜ್ಜಿಗೆಯ ಗುಣಗಾನ ಬೇಸಿಗೆಯಲ್ಲಿ ತಪ್ಪದೆ ಮಾಡುತ್ತಾರೆ. ಮಜ್ಜಿಗೆಯೂ ಕೂಡ ದೇಹಕ್ಕೆ ತಂಪು ನೀಡುತ್ತದೆ. ಆದಷ್ಟು ಮನೆಯಲ್ಲಿಯೇ ಮಜ್ಜಿಗೆ ಮಾಡಿಕೊಳ್ಳುವುದು ಉತ್ತಮ. ಹೊರಗಡೆ ಮಜ್ಜಿಗೆ ತಯಾರಿಸಲು ಬಳಸುವ ನೀರು ಉತ್ತಮವಾಗಿಲ್ಲದೆ ಇರಬಹುದು. ಹೆಚ್ಚು ಕಷ್ಟಪಡುವ ಅಗತ್ಯವಿಲ್ಲದೆ ಮನೆಯಲ್ಲಿ ಮಜ್ಜಿಗೆ ತಯಾರಿಸಿ ಇಟ್ಟುಕೊಳ್ಳಿ. ಹೊರಗಿನಿಂದ ಬಂದೊಡನೆ ನೀವಾಗಲಿ ಅಥವಾ ಮನೆಗೆ ಬರುವ ಅಥಿತಿಗಾಗಲಿ ಮಜ್ಜಿಗೆ ಉತ್ತಮ ಪಾನೀಯ. ಮಜ್ಜಿಗೆಯಲ್ಲಿ ಸ್ವಲ್ಪ ಶುಂಟಿ ಕೊತ್ತಂಬರಿ ಹಾಕಿದರೆ ಇನ್ನೂ ಅದರ ರುಚಿ ಎರಡರಷ್ಟು ಆಗುತ್ತದೆ.

ಹೆಸರು ಬೇಳೆ

ಹೆಸರು ಬೆಳೆ ಇನ್ನೊಂದು ಪ್ರಮುಖ ಉಪಯೋಗಿ ವಸ್ತು. ನಿಮ್ಮ ಅಡಿಗೆಯಲ್ಲಿ ನಿಯಮಿತವಾಗಿ ಹೆಸರುಬೇಳೆ ಬಳಸಿ. ಪಾಯಸ, ಸಿಹಿ ಪೊಂಗಲ್, ಖಾರ ಪೊಂಗಲ್, ಕೋಸಂಬರಿ ಹೀಗೆ ಅನೇಕ ಬಗೆಯಲ್ಲಿ ಹೆಸರುಬೇಳೆಯನ್ನು ಸೇವಿಸ ಬಹುದು. ಹೆಸರುಬೇಳೆ ನಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ ಕೂಡ ನೀಡುತ್ತದೆ. ಹೆಸರುಬೇಳೆ ಪಾನಕ /ಪಾಯಸ ಬಹು ರುಚಿ. ಬಿಸಿಲಿನ ದಾಹ ತಣಿಸುವ- ತಂಪು ತಂಪು ಮಜ್ಜಿಗೆ…

ಸೌತೆಕಾಯಿ

ಸೌತೆಕಾಯಿ ಬೇಸಿಗೆಯಲ್ಲಿ ಅತಿ ಹೆಚ್ಚು ಮಾರಾಟವಾಗುವುದೇನೋ. ಅಷ್ಟು ಡಿಮಾಂಡ್ ಇದೆ. ಸೌತೆಕಾಯಿ ಬೇಸಿಗೆಯಲ್ಲಿ ಮರೆಯದೆ ಉಪಯೋಗಿಸಬೇಕು. ಸೌತೆಕಾಯಿಯಲ್ಲಿ ಅತಿ ಕಡಿಮೆ ಕ್ಯಾಲೊರಿಗಳು ಇದ್ದು ಬಹಳಷ್ಟು ಪೋಷಕಾಂಶಗಳಿಂದ ಸಮೃದ್ದವಾಗಿದೆ. ಇದರಿಂದ ದೇಹಕ್ಕೆ ತಂಪು ಮಾತ್ರ ಅಲ್ಲದೆ ದೇಹದ ತೂಕವು ನಿಯಂತ್ರಣದಲ್ಲಿ ಇರುತ್ತದೆ.

ಕರಿದ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಡಿ


ಇವೆಷ್ಟೆ ಅಲ್ಲದೆ, ನಾವು ಸೇವಿಸುವ ಆಹಾರದಲ್ಲೂ ಸ್ವಲ್ಪ ಗಮನ ವಹಿಸಬೇಕು. ಕರಿದ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಡಿ. ಹೆಚ್ಚು ನೀರು ಕುಡಿಯಿರಿ. ಕಾಫಿ ಟೀ ಇಂದ ಸ್ವಲ್ಪ ದೂರ ಇದ್ದರೆ ಒಳ್ಳೆಯದು. ಇನ್ನೂ ಹೊರಗೆ ಹೋಗುವಾಗ ಕ್ಯಾಪ್ / ಟೋಪಿ ಧರಿಸಿ. ಬಿಸಿಲ ಬೇಗೆ ಹೆಚ್ಚು ಹೆಚ್ಚಾಗಿ ನಾವು ಏನಾದರೂ ತೊಂದರೆ ಅನುಭವಿಸುವ ಮೊದಲೇ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಬೇಸಿಗೆಯಲ್ಲೂ ಹಾಯಾಗಿ ಇರಬಹುದು.🙏

Related Articles

Leave a Reply

Your email address will not be published. Required fields are marked *

Back to top button