ತಾಯಿ ಶಾರದೆಯ ನೆಲೆವೀಡು ಶೃಂಗೇರಿ
ಚಿಕ್ಕಮಗಳೂರು: ತಾಯಿ ಶಾರದೆಯ ನೆಲೆವೀಡು ಶೃಂಗೇರಿಯು
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲೂಕು 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಸ್ಥಾಪಿಸಿದರು. ಶೃಂಗೇರಿಯು ತುಂಗಾ ನದಿ ತಟದಲ್ಲಿರುವ ಚಿಕ್ಕ ಊರಾಗಿದೆ.
ನಮ್ಮ ಶೃಂಗೇರಿಯ ಇತಿಹಾಸ ನೋಡೋದಾದರೆ ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ, ಇದು ಸಮೀಪದಲ್ಲೇ ಇರುವ ಒಂದು ಬೆಟ್ಟದ ಹೆಸರು. ಪ್ರತೀತಿಗನುಸಾರವಾಗಿ ಈ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ಇದ್ದರು. ಋಷ್ಯಶೃಂಗನ ಪ್ರಸ್ತಾಪ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ. ವಸಿಷ್ಠ ತಿಳಿಸುವ ಉಪಕಥೆ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ. ಶೃಂಗೇರಿಯಲ್ಲಿರುವ ತುಂಬಾ ದೇವಸ್ಥಾನಗಳಲ್ಲಿ ವಿದ್ಯಾಶಂಕರ ದೇವಸ್ಥಾನವು ಒಂದಾಗಿದೆ. ಈ ದೇವಸ್ಥಾನವು 14ನೇ ಶತಮಾನದ ವಿಜಯನಗರದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. ವಿಜಯನಗರದ ಕಾಲದಲ್ಲಿ ಕಟ್ಟಿಸಿದ್ದಾದರೂ ಕೂಡ ಈ ದೇವಾಲಯ ಇನ್ನೂ ಹಿಂದಿನ ಹೊಯ್ಸಳ ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ಕೆಲವು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.
ವಿಜಯನಗರ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ. ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿ ಇರುತ್ತಾನೋ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ
ಶೃಂಗೇರಿಯ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಎರಡು ಪ್ರಮುಖ ದೇವಾಲಯಗಳಿವೆ. ಮೊದಲನೆಯದು, ಋಷ್ಯಶೃಂಗರ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಮಲ್ಲಿಕಾರ್ಜುನ ಬೆಟ್ಟದಲ್ಲಿದೆ. ಇದಕ್ಕೆ ಮಲಹಾನಿಕರೇಶ್ವರ ಎಂಬ ಹೆಸರಿದ್ದು, ಈ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಎರಡನೆಯದು, ಶೃಂಗೇರಿಯಿಂದ 10ಕಿ.ಮೀ. ದೂರದಲ್ಲಿ ಕಿಗ್ಗವೆಂಬ ಊರಿದೆ(ಹಿಂದೆ ಇದನ್ನು ಋಷ್ಯಶೃಂಗಪುರ ಎಂದು ಕರೆತ್ತಿದ್ದರು). ಇಲ್ಲಿ ಋಷ್ಯಶೃಂಗರ ಆತ್ಮಜ್ಯೋತಿ, ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಇದು ಈ ಊರಿನ ಇತಿಹಾಸ.
ರಾಜಕೀಯ ನೋಡುವುದಾದರೆ :-
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ಒಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.
ಶೃಂಗೇರಿಯು ಜಿಲ್ಲೆಯ ಮುಖ್ಯ ಕೇಂದ್ರವಾಗಿದ್ದು, ಚಿಕ್ಕಮಗಳೂರಿನಿಂದ 90 ಕಿ.ಮೀ.ಗಳ ದೂರದಲ್ಲಿದೆ. ಬೀರೂರು ಮತ್ತು ಶಿವಮೊಗ್ಗದ ರೈಲ್ವೆ ನಿಲ್ದಾಣದಿಂದ ಶೃಂಗೇರಿ ಸುಮಾರು 96ಕಿ.ಮೀ. ದೂರದಲ್ಲಿದೆ. ರಸ್ತೆಯಲ್ಲಿ ಪ್ರಯಾಣ ಮಾಡಿದರೆ, ಮಂಗಳೂರು ಇಲ್ಲಿಗೆ 107 ಕಿ.ಮೀ. ದೂರದಲ್ಲಿದೆ. 350 ಕಿ.ಮೀ. ದೂರದ ಬೆಂಗಳೂರಿಗೆ ಹಗಲು-ರಾತ್ರಿಗಳ ಬಸ್ ಸೌಲಭ್ಯವಿದ್ದು, ಕಾಡು, ಕಣಿವೆ, ಗಿರಿಗಳ ಮಧ್ಯೆ ನಿಸರ್ಗದ ರುದ್ರರಮಣೀಯತೆಯನ್ನು, ಪ್ರಯಾಣಿಸುವಾಗ ನೋಡಿ ಅನುಭವಿಸಬಹುದಾಗಿದೆ.
ಇಲ್ಲಿನ ಆರ್ಥಿಕತೆಯು ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಅಡಿಕೆ ಹಾಗು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಕಾಫಿ, ಬಾಳೆ, ವೀಳ್ಯದೆಲೆ, ಕರಿಮೆಣಸು ಮತ್ತು ಏಲಕ್ಕಿಯನ್ನು ಅಡಿಕೆಯೊಂದಿಗೆ ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
ಶೃಂಗೇರಿಯ ಪ್ರವಾಸಿ ಸ್ಥಳಗಳು:-
ಶೃಂಗೇರಿ ಪಟ್ಟಣದಲ್ಲಿ ಅನೇಕ ದೇವಾಲಯಗಳಿದ್ದು ಅವುಗಳದ್ದೇ ಆದ ಮಹತ್ವ ಹೊಂದಿರುತ್ತದೆ. ಆವುಗಳಲ್ಲಿ ಕಾಳಿಕಾಂಬ ದೇವಸ್ತಾನ, ದುರ್ಗಾ ದೇವಸ್ತಾನ, ಕೆರೆ ಆಂಜನೇಯ ದೇವಸ್ತಾನ, ಕಾಲ ಭೈರವ ದೇವಸ್ತಾನ (ಇವು 4 ದಿಕ್ ಪಾಲಕ ದೇವರುಗಳಾಗಿದ್ದು, ಇವನ್ನು ಆದಿ ಶಂಕರರು ಸ್ತಾಪಿಸಿದ್ದಾರೆ). ಇವಲ್ಲದೆ, ಬೆಟ್ಟದ ಮಲಹನಿಕೇಶ್ವರ ದೇವಾಲಯ(ಋಷ್ಯಶೃಂಗ ಮುನಿಗಳ ತಂದೆ), ಛಪ್ಪರದಾಂಜನೇಯ ದೇವಾಲಯ, ವೆಂಕಟರಮಣ ದೇವಾಲಯಗಳನ್ನೂ ಸಹ ನೋಡಬಹುದು. ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ. ಶೃಂಗೇರಿಯು ತುಂಗಾ ನದಿಯ ದಡದಲ್ಲಿ ನಿರ್ಮಾಣವಾದ ಪಟ್ಟಣ.
ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ. ಈ ಜಲಪಾತವು ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನದಿಂದ ಕೇವಲ
ಐದು ಕಿಲೋ ಮೀಟರುಗಳ ದೂರದಲ್ಲಿದೆ.
ಮಘೇಬೈಲು ಜಲಪಾತ – ಇದು ಸಿರಿಮನೆಗೆ ಹತ್ತಿರವಿರುವ ಇನ್ನೊಂದು ಜಲಪಾತ.
ನರಸಿಂಹ ವನ – ತುಂಗಾ ನದಿಯ ಇನ್ನೊಂದು ಪಕ್ಕದಲ್ಲಿ ನರಸಿಂಹ ವನವಿದೆ. ಇಲ್ಲಿ ಜಗದ್ಗುರುಗಳ ನಿವಾಸವಿದ್ದು ಪ್ರತಿ ದಿನ ಭಕ್ತರಿಗೆ ದರ್ಶನ ಕೊಡುತ್ತಾರೆ. ಇದಲ್ಲದೆ ವೇದ ಪಾಠಶಾಲೆ, ಸಂಸ್ಕ್ರುತ ಗ್ರಂಥಾಲಯವಿದೆ. ಇಲ್ಲಿಯೇ ಗೋಶಾಲೆ, ಗಜ ಶಾಲೆ ಕೂಡ ಇದೆ.
ಕುದುರೆಮುಖ – ಕುದುರೆಮುಖ ಸುಂದರ ಗಿರಿಧಾಮವಾಗಿದ್ದು , ಕರ್ನಾಟಕದ ಅತ್ಯಂತ ಸುಂದರ ಪರಿಸರ ತಾಣಗಳಲ್ಲಿ ಒಂದಾಗಿದೆ. ಚಾರಣಿಗರ ಸ್ವರ್ಗವೆನಿಸಿದೆ. ಇದು ಶೃಂಗೇರಿಯಿಂದ 50 ಕಿ.ಮೀ. ದೂರದಲ್ಲಿದೆ.
ಗಂಗಾಮೂಲ – ತುಂಗಾ ಭದ್ರಾ ಹಾಗೂ ನೇತ್ರಾ ನದಿಗಳ ಉಗಮ ಸ್ಥಾನ.
ನರಸಿಂಹ ಪರ್ವತ – ಚಾರಣಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ.
ಹನುಮಾನ್ ಗುಂಡಿ (ಸೂತನಬ್ಬಿ) ಜಲಪಾತ- ಇದು ಗಂಗಾಮೂಲದ ಸಮೀಪವಿದೆ. ಕೆರೆಕಟ್ಟೆಯಿಂದ ಕುದುರೆಮುಖಕ್ಕೆ ಹೋಗುವ ಮಾರ್ಗದಲ್ಲಿದೆ.
ದೇವರ ಮನೆ ವನದುರ್ಗಪರಮೇಶ್ವರಿ ದೇವಾಲಯ ಕಿಗ್ಗ ಮಾರ್ಗ ಗಂಡಘಟ್ಟ ಸಮೀಪದಲ್ಲಿದೆ.