ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಮತದಾನ
ಕೊಪ್ಪಳ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದಂತೆ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ತಿಳಿಸಿದರು.
ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾರ್ಚ 29ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಈ ಮಾಹಿತಿ ನೀಡಿದರು. ಏಪ್ರೀಲ್ 13 ರಂದು ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಏಪ್ರೀಲ್ 20 ಕೊನೆಯ ದಿನವಾಗಿದೆ. ಏಪ್ರೀಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಏಪ್ರೀಲ್ 24 ಕೊನೆಯ ದಿನವಾಗಿದೆ. ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ. ಮೇ 15ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಾದ 60-ಕುಷ್ಟಗಿಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, 61-ಕನಕಗಿರಿ (ಎಸ್.ಸಿ)ಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು, 62-ಗಂಗಾವತಿಗೆ ಸಹಾಯಕ ಆಯುಕ್ತರು, 63-ಯಲಬುರ್ಗಾಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, 64-ಕೊಪ್ಪಳಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಆರ್‌ಓಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,322 ಮತಗಟ್ಟೆಗಳಿವೆ. 5,62,376 ಪುರುಷರು ಮತ್ತು 5,66,341 ಮಹಿಳೆಯರು ಹಾಗೂ ಇತರೆ 47 ಸೇರಿ ಒಟ್ಟು 11,28,764 ಮತದಾರರಿದ್ದಾರೆ. 11,28,764 ಮತದಾರರ ಪೈಕಿ 26,867 ಯುವ ಮತದಾರರು, 14,030 ವಿಕಲಚೇತನ ಮತದಾರರು ಇದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 18,301 ಇದೆ ಎಂದು ಮಾಹಿತಿ ನೀಡಿದರು.
ನೀತಿ ಸಂಹಿತೆ ಜಾರಿ:
ಮಾರ್ಚ್ 29ರ ಬೆಳಗ್ಗೆ 11.30 ರಿಂದ ಅನ್ವಯವಾಗುವಂತೆ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಮತ್ತು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ವೆಚ್ಚ ವೀಕ್ಷಣೆ ತಂಡಗಳನ್ನು ಸಹ ನೇಮಿಸಲಾಗಿದೆ ಎಂದು ತಿಳಿಸಿದರು.
ಚೆಕ್ ಪೋಸ್ಟ್ ಸ್ಥಾಪನೆ:
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಿವಿಧ 14 ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಕುಷ್ಟಗಿ ತಾಲೂಕಿನಲ್ಲಿ ಬಾದಿಮನಾಳ ಕ್ರಾಸ್, ಕಿಲ್ಲಾರಹಟ್ಟಿ ಮತ್ತು ಕ್ಯಾದಿಗುಪ್ಪದಲ್ಲಿ, ಕನಕಗಿರಿ ತಾಲೂಕಿನಲ್ಲಿ ಚನ್ನಳ್ಳಿ ಕ್ರಾಸ್, ನವಲಿ ಮತ್ತು ಹುಲಿಹೈದರ್‌ಗಳಲ್ಲಿ, ಗಂಗಾವತಿ ತಾಲೂಕಿನಲ್ಲಿ ಕಡೆಬಾಗಿಲು ಬ್ರಿಡ್ಸ್, ಚಿಕ್ಕಜಂತಕಲ್ ಮತ್ತು ವಿದ್ಯಾನಗರಕ್ರಾಸ್‌ನಲ್ಲಿ, ಯಲಬುರ್ಗಾ ತಾಲೂಕಿನಲ್ಲಿ ಬನ್ನಿಕೊಪ್ಪ, ಬಂಡಿಕ್ರಾಸ್ ಮತ್ತು ಸಂಕನೂರ ಕ್ರಾಸ್‌ಗಳಲ್ಲಿ, ಕೊಪ್ಪಳ ತಾಲೂಕಿನಲ್ಲಿ ಮೂನ್‌ಲೈಟ್‌ಡಾಬಾ ಮತ್ತು ಬೆಳಗಟ್ಟಿನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ದೂರುಗಳ ನಿರ್ವಹಣೆಗೆ ವ್ಯವಸ್ಥೆ:
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿತ ಎಲ್ಲಾ ರೀತಿಯ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1950 ಟೋಲ್ ಫ್ರೀ ಸಂಖ್ಯೆಯೊಂದಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ 24*7 ದೂರುಗಳನ್ನು ಸಲ್ಲಿಸಬಹುದಾಗಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿಗಳಿಗೆ, ಮಾದರಿ ನೀತಿ ಸಂಹಿತೆ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಇವರಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಭಾರತ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾವಹಿಸಲು ಸಿ-ವಿಜಿಲ್ ಮೊಬೈಲ್ ಆ್ಯಪ್‌ನ್ನು ಪರಿಚಯಿಸಿದ್ದು, ಮತದಾರರು ಮೊಬೈಲ್‌ನಲ್ಲಿ ಈ ಆ್ಯಪ್‌ನ್ನು ಡೌನ್ಲೋಡ್ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಈ ಮೂಲಕ ದೂರುಗಳನ್ನು ದಾಖಲಿಸಬಹುದಾಗುದೆ ಎಂದು ತಿಳಿಸಿದರು.
ವಿಶೇಷ ಮತಗಟ್ಟೆಗಳ ಸ್ಥಾಪನೆ:
ಚುನಾವಣೆ ನಿಮಿತ್ತ ಮತದಾನದ ಸಲುವಾಗಿ ಎಲ್ಲಾ ಮತದಾರರಿಗೆ ವೋಟರ್ ಸ್ಲಿಪ್ ಗಳನ್ನು ಮತ್ತು ಮನೆಗಳಿಗೆ ವೋಟರ್ ಗೈಡ್‌ಗಳನ್ನು ವಿತರಿಸಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಮತದಾನದ ದಿನದಂದು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಂತೆ ಮಹಿಳಾ ಸಿಬ್ಬಂದಿ ಮಾತ್ರ ಒಳಗೊಂಡ ಸಖಿ ಮತಗಟ್ಟೆಯನ್ನು, ವಿಕಲಚೇತನ ಸಿಬ್ಬಂದಿಯಿಂದ ಕಾರ್ಯನಿರ್ವಹಿಸುವ ವಿಕಲಚೇತನರ ಮತಗಟ್ಟೆಗಳನ್ನು ಮತ್ತು ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸ್ವೀಪ್ ಚಟುವಟಿಕೆ ಚುರುಕು:
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಹಂತದಲ್ಲಿ ಮತ ಯಂತ್ರಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗಿದೆ. ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುತ್ತದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಪಾಲನೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲಾದ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ವ್ಯವಸ್ಥೆ ಮಾಡಲಾಗುತ್ತದೆ. ಚುನಾವಣಾ ಹಿನ್ನೆಲೆಯಲ್ಲಿ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಹಾಗೂ ಇತರರು ಇದ್ದರು.