ಮತದಾನ ಜಾಗೃತಿಗಾಗಿ ಅಧಿಕಾರಿಗಳ ವಿನೂತನ ಪ್ರಯತ್ನ
ನಂಜನಗೂಡು: ಚುನಾವಣೆ ಸನಿಹವಾಗುತ್ತಿದೆ. ಆಕಾಂಕ್ಷಿಗಳಲ್ಲಿ ಉತ್ಸಾಹ ಮೂಡುತ್ತಿದೆ. ಜೊತೆಗೆ ಅಧಿಕಾರಿಗಳಲ್ಲೂ ಜವಾಬ್ದಾರಿ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮತದಾರರಿಗೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ದಕ್ಷಿಣಕಾಶಿ ನಂಜನಗೂಡಿನಲ್ಲಿ ಅಧಿಕಾರಿ ಸಿಬ್ಬಂದಿವರ್ಗ ವಿನೂತನವಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಬೈಕ್ ರ್ಯಾಲಿ ಹಾಗೂ ಕಾಲ್ನಡಿಗೆ ಜಾಥಾ ಹೊರಟು ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ನಂಜನಗೂಡು ತಾಲೂಕು ಸ್ವೀಪ್ ಸಮಿತಿಯ ಮೂಲಕ ಮತದಾನದ ಜಾಗೃತಿ ಜಾಥ ಕಾರ್ಯಕ್ರಮ ನಡೆದಿದೆ. ತಾಲೂಕು ಪಂಚಾಯಿತಿ ಕಛೇರಿ ಮುಂಭಾಗದಲ್ಲಿ ಮತದಾನದ ಜಾಗೃತಿ ಜಾಥಾಗೆ ಚಾಲನೆ ದೊರೆತಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಮತ್ತು ತಹಶೀಲ್ದಾರ್ ಶಿವಕುಮಾರ್ ರವರಿಂದ ಮತದಾನದ ಜಾಗೃತಿ ಚಾಥಕ್ಕೆ ಚಾಲನೆ ದೊರೆತಿದೆ.
ತಾಲೂಕು ಪಂಚಾಯಿತಿ ಕಾರ್ಯಾಲಯದಿಂದ ಎಂ.ಜಿ ರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣದವರೆಗೂ ಬೈಕ್ ರ್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ. ಇಓ ಶ್ರೀನಿವಾಸ್ ಮಾತನಾಡಿ ತಾಲೂಕಿನ ಅಂಗವಿಕಲರು ಮತ್ತು ವಯಸ್ಸಾದ ವೃದ್ಧರಿಗೆ ಚುನಾವಣಾ ಆಯೋಗದ ಮೆರೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡುತ್ತಿರುವ ವೃದ್ಧರು ಮತ್ತು ಅಂಗವಿಕಲರಿಗೆ ಮನೆಯಲ್ಲಿ ಕುಳಿತು ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನಲ್ಲಿರುವ ಐದು ಗಿರಿಜನ ಕಾಲೋನಿಗಳ ಮತದಾರರಿಗೆ ವಿಶೇಷ ಸೌಲಭ್ಯವನ್ನು ನೀಡಲಾಗಿದೆ. ಗಿರಿಜನರು ವಾಸ ಮಾಡುವ ಸ್ಥಳದಲ್ಲಿ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮತದಾನದ ಸಂದರ್ಭದಲ್ಲಿ ಮತದಾರರಿಗೆ ಯಾವುದೇ ಕುಂದು ಕೊರತೆಗಳು ಆಗದ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಚುನಾವಣೆ ಆಯೋಗದ ಎಲ್ಲಾ ರೀತಿ ಸಿದ್ಧತೆ ಮಾಡಲಾಗಿದೆ ಎಂದರು.
ಜಾಥಾದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪ ತಹಶೀಲ್ದಾರ್ ಭೈರಯ್ಯ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.