ಕ್ರೀಡೆ

ಸೋಲಿಗೆ ಶರಣಾದ ಟೀಮ್ ಇಂಡಿಯಾ: ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 21 ರನ್‌ಗಳ ಅಂತರದ ಸೋಲು ಅನುಭವಿಸಿ ಏಕದಿನ ಸರಣಿಯನ್ನು 2-1 ಅಂತರದಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬಿಟ್ಟುಕೊಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾವನ್ನು ಭಾರತ ತಂಡ 49 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟ್ ಮಾಡಿತು. ಆಸೀಸ್ ಆರಂಭಿಕರಾದ ಟ್ರಾವಿಸ್ ಹೆಡ್ 33 ಮತ್ತು ಮಿಚೆಲ್ ಮಾರ್ಷ್ 47 ಗಳಿಸಿ ಔಟಾದರು. ನಾಯಕ ಸ್ಮಿತ್ ಶೂನ್ಯಕ್ಕೆ ಔಟಾದರು. ಡೇವಿಡ್ ವಾರ್ನರ್ 23 ಮಾರ್ನಸ್ ಲ್ಯಾಬುಸ್ಚಾಗ್ನೆ 28 ರನ್ ಕೊಡುಗೆ ಸಲ್ಲಿಸಿದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 38 ರನ್, ಮಾರ್ಕಸ್ ಸ್ಟೊಯಿನಿಸ್ 25, ಸೀನ್ ಅಬಾಟ್ 26 ರನ್, ಆಷ್ಟನ್ ಅಗರ್ 17, ಮಿಚೆಲ್ ಸ್ಟಾರ್ಕ್ 10, ಆಡಮ್ ಝಂಪಾ ಅಜೇಯ 10 ರನ್ ಗಳಿಸಿದರು. ಎಲ್ಲಾ ಆಟಗಾರವು ತಮ್ಮದೇ ಆದ ರನ್ ಗಳ ಕೊಡುಗೆಯ ಮೂಲಕ ಗೌರವಯುತ ಮೊತ್ತ ಕಲೆ ಹಾಕಲು ಕಾರಣವಾದರು.

270 ರನ್ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಸ್ಪೋಟಕ ಆಟ ಆಡಲು ಮುಂದಾದರು, 30 ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ಆರಂಭಿಕ ಆಟಗಾರ ಶುಭಮನ್ ಗಿಲ್ 37 ರನ್ ಗಳಿಸಿದ್ದ ವೇಳೆ ಝಂಪಾಎಸೆದ ಚೆಂಡಿಗೆ ಎಲ್ಬಿಡಬ್ಲ್ಯೂ ಗೆ ನಿರ್ಗಮಿಸಿದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿದರು. 54 ರನ್ ಆಗುವ ವೇಳೆ ಔಟಾದರು. ಕೆಎಲ್ ರಾಹುಲ್ 32, ಅಕ್ಷರ್ ಪಟೇಲ್ 2 ಗಳಿಸಿದ್ದ ವೇಳೆ ರನ್ ಔಟ್ ಆದರು. ನಿರೀಕ್ಷೆ ಇರಿಸಿದ್ದ ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿದ್ದ ವೇಳೆ ಝಂಪಾ ಎಸೆದ ಚೆಂಡನ್ನು ಸ್ಟೀವನ್ ಸ್ಮಿತ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಮತ್ತೊಮ್ಮೆ ವಿಫಲರಾದ ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು.ರವೀಂದ್ರ ಜಡೇಜಾ 18 ರನ್ ಗೆ ಔಟಾದ ಬಳಿಕ ಭಾರತ ತಂಡದ ಗೆಲುವಿನ ಭರವಸೆ ಹುಸಿಯಾಯಿತು.49.1ಓವರ್ ಗಳಲ್ಲಿ 248 ರನ್ ಗಳಿಗೆ ರೋಹಿತ್ ಪಡೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

ಕುಲದೀಪ್ ಯಾದವ್ 6 , ಕೊನೆಯಲ್ಲಿ ಬಂದ ಮೊಹಮ್ಮದ್ ಶಮಿ 14 ರನ್ ಗಳಿಸಿ ಔಟಾದರು. ಸಿರಾಜ್ 3 ರನ್ ಗಳಿಸಿ ಔಟಾಗದೆ ಉಳಿದರು.ಆಸೀಸ್ ಪರ ಆಡಮ್ ಝಂಪಾ 10 ಓವರ್ ಗಳಲ್ಲಿ 45 ರನ್ ನೀಡಿ 4 ಪ್ರಮುಖ ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಷ್ಟನ್ ಅಗರ್ 2 ಪ್ರಮುಖ ವಿಕೆಟ್ ಕಿತ್ತರೆ, ಮಾರ್ಕಸ್ ಸ್ಟೊಯಿನಿಸ್ ಮತ್ತು ಸೀನ್ ಅಬಾಟ್ ತಲಾ ಒಂದು ವಿಕೆಟ್ ಪಡೆದರು.

Related Articles

Leave a Reply

Your email address will not be published. Required fields are marked *

Back to top button