ನಮ್ಮ ಪಕ್ಷ 136 ಸ್ಥಾನ ಗೆಲ್ಲುವುದು ಖಚಿತ: ಡಿ.ಕೆ.ಶಿವಕುಮಾರ್
ಪ್ರಜಾಪ್ರಭುತ್ವ ಬಂದ ಮೇಲೆ ನಾವು ಸಂವಿಧಾನದ ಮೂಲಕ ಸಾಕಷ್ಟು ಸೌಲಭ್ಯ, ಅಧಿಕಾರ ಪಡೆದಿದ್ದೇವೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ನಾವು ಈ ಹಕ್ಕು, ಅಧಿಕಾರವನ್ನು ಪಡೆದಿದ್ದೇವೆ. ನಾವು ಎಷ್ಟೋ ದೇವರುಗಳನ್ನು ಪೂಜೆ ಮಾಡುತ್ತೇವೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಗ್ರಹಗಳಷ್ಟು ದೇಶದಲ್ಲಿ ಬೇರೆ ಯಾವುದೇ ನಾಯಕರ ಪ್ರತಿಮೆಗಳಿಲ್ಲ. ಇನ್ನು ಭೂಮಿ ಮೇಲೆ ರಾಮನ ಭಂಟ ಆಂಜನೇಯನ ದೇವಾಲಯ ಹೆಚ್ಚಾಗಿದೆಯೇ ಹೊರತು, ರಾಮನ ತಂದೆ ದಶರಥನದ್ದಲ್ಲ. ಕಾರಣ ನಾವು ಸಮಾಜದಲ್ಲಿ ಸೇವೆ ಮಾಡುವವರನ್ನು ಹೆಚ್ಚು ಸ್ಮರಿಸುತ್ತೇವೆ.
ನಮ್ಮ ನಾಯಕರು ಇಂದು ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಹೇಳಿದ್ದಾರೆ. ಆದರೆ ಬಿಜೆಪಿ ಸರ್ಕಾರ ರಾಜ್ಯ ಹಾಗೂ ದೇಶದಲ್ಲಿ ಆಡಳಿತ ಮಾಡುತ್ತಿದ್ದು, ಅವರು ಜನರಿಗೆ ನೆರವಾಗುವಂತಹ ಯಾವುದೇ ಒಂದು ಕಾರ್ಯಕ್ರಮ ನೀಡಿಲ್ಲ. ನಾನು ಕಳೆದ ನಾಲ್ಕು ದಶಕಗಳಿಂದ ಬಿಜೆಪಿ, ಜೆಡಿಎಸ್ ಹಾಗೂ ಸಮ್ಮಿಶ್ರ ಸರ್ಕಾರ ನೋಡಿದ್ದೇವೆ. ಎಲ್ಲ ಸರ್ಕಾರ ತನ್ನ ಕೆಲಸ ಸಾಧನೆ ಮಾಡಿ ಹೆಜ್ಜೆಗುರುತು ಮೂಡಿಸಿರುತ್ತವೆ. ಆದರೆ ಬಿಜೆಪಿಯ ಸಾಧನೆ ಏನು? ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಉತ್ಪಾದನೆ ದುಪ್ಪಟ್ಟು ಮಾಡಿ ರಾಜ್ಯವನ್ನು ಸ್ವಾವಲಂಬನೆ ರಾಜ್ಯವನ್ನಾಗಿ ಮಾಡಿದ್ದೇವೆ.
ನಾವು ಕುವೆಂಪು, ಬಸವಣ್ಣ, ಕನಕದಾಸ, ಶಿಶುನಾಳ ಶರೀಫರ ನಾಡಿನಲ್ಲಿದ್ದು ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡಿದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಮಕ್ಕಳನ್ನು ಶಾಲೆಯತ್ತ ಕರೆತರಲು ಬಿಸಿಯೂಟ ಕಾರ್ಯಕ್ರಮ, ಮಹಿಳೆಯರಿಗೆ ಶಕ್ತಿ ತುಂಬಲು ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ನೆರವು, ಇಂದಿರಾ ಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ, ಸಾರ್ವಜನಿಕ ಉದ್ದಿಮೆ ಸ್ಥಾಪಿಸಿವೆ. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿ ಮಾಡಿದೆಯೇ?
ಚುನಾವಣೆ ನಮಗೆ ಪರೀಕ್ಷೆ ಇದ್ದಂತೆ ನಾವು ಏನು ಮಾಡಿದ್ದೇವೆ ಎಂಬುದರ ಮೇಲೆ ನೀವು ಫಲಿತಾಂಶ ನೀಡಬೇಕು. ಬಿಜೆಪಿ ಕಳೆದ ಚುನಾವಣೆಗೂ ಮುನ್ನ ಕೊಟ್ಟ 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಮೋದಿ ಅವರ ಅಚ್ಛೇದಿನ ನೀಡುತ್ತೇವೆ ಎಂದರು, ರೈತರ ಆದಾಯ ಡಡಬಲ್ ಮಾಡುತ್ತೇವೆ ಎಂದರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, ಈ ಭರವಸೆಗಳನ್ನು ಈಡೇರಿಸಿದ್ದಾರಾ? ಅವರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಆಗಲಿಲ್ಲ.
ಬಿಜೆಪಿಯ ವೈಫಲ್ಯ, ದುರಾಡಳಿತದ ಬಗ್ಗೆ ನಾವು ಬಿಜೆಪಿ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ. ಅಧಿಕಾರ ಇದ್ದಾಗ ಜನರ ಸೇವೆ, ಜನರ ಬದುಕಿನಲ್ಲಿ ಬದಲಾವಣೆ ತರಲಿಲ್ಲ ಎಂದರೆ ಅವರಿಗೆ ಅಧಿಕಾರ ಏಕೆ? ರೈತರಿಗಾಗಿ ರಸಗೊಬ್ಬರ ಬೆಲೆ ಕಡಿಮೆ ಮಾಡಿದ್ದಾರಾ? ಕೋವಿಡ್ ಸಮಯದಲ್ಲಿ ಚಿಕಿತ್ಸೆ ವೆಚ್ಚ ಭರಿಸಿದರಾ? ಸತ್ತವರಿಗೆ ಪರಿಹಾರ ಕೊಟ್ಟರಾ? ಸಾಂಪ್ರದಾಯಿಕ ವೃತ್ತಿಪರರಿಗೆ ಪರಿಹಾರ ನೀಡಲಿಲ್ಲ. ವಲಸೆ ಕಾರ್ಮಿಕರು ತಮ್ಮ ಊರಿಗೆ ಹೋಗಲು ಮೂರು ಪಟ್ಟು ಹಣ ವಸೂಲಿಗೆ ನಿಂತರು. ಆಗ ನಾನು 1 ಕೋಟಿ ಚೆಕ್ ಬರೆದು ಕೊಡಲು ಮುಂದಾದಾಗ ಅವರು ಒಂದು ವಾರ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಿದರು. ಆದರೂ ಈ ಸರ್ಕಾರ ಯಾಕೆ ಬೇಕು?
ಮೋದಿ ಅವರು 21 ದಿನಗಳಲ್ಲಿ ಕೋವಿಡ್ ಯುದ್ಧ ಮುಗಿಸುತ್ತೇವೆ ಎಂದು, ದೀಪ ಹಚ್ಚಿಸಿ, ಚಪ್ಪಾಳೆ,, ಜಾಗಟೆ ಹೊಡೆಸಿದರು. ಅವರಿಂದ ಸರಿಯಾಗಿ ಲಸಿಕೆ ನೀಡಲು ಆಗಲಿಲ್ಲ. ಕೋವಿಡ್ ನಿಂದ 4.50 ಲಕ್ಷ ಜನ ಸತ್ತರು. ಆಕ್ಸಿಜನ್ ನೀಡದೇ 36 ಜನ ಸತ್ತರು. ಆದರೆ ಸರ್ಕಾರದ ಸಚಿವರು ಕೇವಲ 3 ಜನ ಸತ್ತರು ಎಂದು ಸುಳ್ಳು ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ಅಲ್ಲಿಗೆ ಹೋಗಿ ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡಿದೆವು. ಅಲ್ಲದೆ ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಈ ಕುಟುಂಬದ ಸದಸ್ಯರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ್ದೇವೆ.
ದೇವರು ವರವನ್ನೂ ನೀಡಲ್ಲ, ಶಾಪವನ್ನು ನೀಡಲ್ಲ. ಕೇವಲ ಅವಕಾಶ ನೀಡುತ್ತಾನೆ. ಆ ಅವಕಾಶ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ.
ಮನೆ ಇಲ್ಲದವರಿಗೆ ಮನೆ, ನಿವೇಶನ, ಉಳುವವನಿಗೆ ಭೂಮಿ ನೀಡುತ್ತಾ ಬಂದಿದ್ದೇವೆ. ಭಾರತ ಜೋಡೋ ಸಮಯದಲ್ಲಿ ಮಹಿಳೆಯೊಬ್ಬರು ಬಂದು ಬಂದು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟು ಇದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆದಿದ್ದು ಎಂದು ಹೇಳಿ ಕೊಟ್ಟರು. ಕಾಂಗ್ರೆಸ್ ಪಕ್ಷ ಸಾರ್ವಜನಿಕ ಉದ್ದಿಮೆ ಸ್ಥಾಪಿಸಿ ಜನರಿಗೆ ಕೆಲಸ ಕೊಟ್ಟರೆ, ಈ ಬಿಜೆಪಿ ಸರ್ಕಾರ ಎಲ್ಲವನ್ನು ಮಾರುತ್ತಿದೆ. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದು, ಈಗ ಸರ್ಕಾರ ಅದನ್ನು ಮುಚ್ಚಲು ಹೋಗುತ್ತಿದೆ. ರೈತರಿಗೆ ಉಚಿತ ವಿದ್ಯುತ್ ನೀಡಲು ಆರಂಭಿಸಿದ್ದು ಕಾಂಗ್ರೆಸ್, ಪಾವಗಡದಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಸ್ಥಾಪನೆ ಮಾಡಿದ್ದು ಕಾಂಗ್ರೆಸ್. ಇವೆಲ್ಲವೂ ಕಾಂಗ್ರೆಸ್ ಪಕ್ಷದ ಚಿಂತನೆ. ಪ್ರತಿ ತಾಲೂಕಿನಲ್ಲೂ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ.
ಬಡವರಿಗೆ ಸಹಾಯ ಮಾಡಬೇಕು. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಧರ್ಮದ ದ್ವೇಷ ತಡೆಯಲು, ನಿರುದ್ಯೋಗ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದಾರೆ. ಬಿಜೆಪಿ ಯಾವ ಸಾಧನೆ ಮಾಡಿದೆ ಎಂದು ಅವರಿಗೆ ಮತ ನೀಡಬೇಕು?
ಈ ಸರ್ಕಾರದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಹೇಳುತ್ತಾರೆ. ಯತ್ನಾಳ್ ಅವರು ಸಿಎಂ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ನೀಡಬೇಕು ಎಂದಿದ್ದಾರೆ. ಬಿಜೆಪಿ ಶಾಸಕರೇ ಆದ ಗೂಳಿಹಟ್ಟಿ ಶೇಖರ್, ನೀರಾವರಿ ಇಲಾಖೆಯಲ್ಲಿ 22 ಸಾವಿರ ಕೋಟಿ ಅಕ್ರಮದ ಬಗ್ಗೆ ಸಿಎಂಗೆ ದೂರು ನೀಡಿದ್ದಾರೆ. ಇನ್ನು ಸ್ವಾಮೀಜಿಗಳು ಈ ಸರ್ಕಾರಕ್ಕೆ 30% ಕಮಿಷನ್ ನೀಡಬೇಕು ಎಂದರು. ಈ ಭ್ರಷ್ಟ ಸರ್ಕಾರ ತೊಲಗಿಸಿ, ನಿಮ್ಮ ಬದುಕು ಹಸನ ಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ್ದರೆ ಅವರು ಇಷ್ಟು ದಿನಗಳಲ್ಲಿ ತನಿಖೆ ಮಾಡಬಹುದಿತ್ತು. ಅವರು ವಿರೋಧ ಪಕ್ಷದಲ್ಲಿದ್ದಾಗ ಪ್ರಶ್ನೆ ಮಾಡಲಿಲ್ಲ. ಈಗ ಸೋಲಿನ ಭೀತಿ ಎದುರಾಗಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಅಧಿಕಾರ ಮಾಡುವ ಅನುಭವವಿಲ್ಲ ಅವರು ಧರ್ಮ ಜಾತಿಗಳ ಮೇಲೆ ದ್ವೇಷ ಸಾರಿ ರಾಜಕೀಯ ಮಾಡುತ್ತಾರೆ.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಈ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ಈ ಇಬ್ಬರನ್ನು ನಾವು ವಿಧಾನಸೌಧದಲ್ಲಿ ಕೂರುವಂತೆ ಮಾಡುತ್ತೇವೆ. ನೀವು ಒಗ್ಗಟ್ಟಾಗಿ ಕೆಲಸ ಮಾಡಿ. ನಾವು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೆ ನೀವು ಅವರ ಪರವಾಗಿ ಕೆಲಸ ಮಾಡಬೇಕು.
ಬಿಜೆಪಿ ಡಬಲ್ ಇಂಜಿನ್ ಸರ್ಕಾರ ನಿಜಕ್ಕೂ ಸಾಧನೆ ಮಾಡಿದ್ದರೆ ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ಯಾಕೆ ಮಾಡಲಿಲ್ಲ? ಚುನಾವಣೆ ನಡೆಸಲು ಅವರಿಗೆ ಜನರ ಮೇಲೆ ವಿಶ್ವಾಸವಿಲ್ಲ. ಅಮಿತ್ ಶಾ ಅವರು ಬಂದು ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎಂದರು, ಈಗ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಎಂದು ಹೇಳುತ್ತಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಅವರು ರಾಜ್ಯ ಸುತ್ತುತ್ತಿದ್ದು, ಎಲ್ಲಿ ಹೋದರೂ ಜನ ತಾವಾಗಿಯೇ ಉತ್ಸಾಹದಿಂದ ಸೇರುತ್ತಿದ್ದಾರೆ. ಮೇಕೆದಾಟು ಯೋಜನೆ, ಭಾರತ ಜೋಡೋ ಯಾತ್ರೆ, ಐಕ್ಯತಾ ಸಮಾವೇಶದಲ್ಲಿ ಜನರ ಬೆಂಬಲ ಅಭೂತಪೂರ್ವವಾಗಿದೆ.
ಚಿತ್ರದುರ್ಗದ ಜನ ಸ್ವಲ್ಪ ಒರಟಾದರೂ ಬಹಳ ಒಳ್ಳೆಯ ಜನ. ನೀವು ರಾಜ್ಯದ ಬದಲಾವಣೆಗೆ ಪಣ ತೊಡಬೇಕು. ಬಿಜೆಪಿ ನಿಮ್ಮ ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ನಾವು ಕಬ್ಬಿಣವನ್ನು ಎರಡು ರೀತಿ ಬಳಸುತ್ತೇವೆ. ಒಂದು ಕತ್ತರಿಯಾಗಿ, ಮತ್ತೊಂದು ಸೂಜಜಿಯಾಗಿ. ಬಿಜೆಪಿಯವರು ಸಮಾಜವನ್ನು ಕತ್ತರಿಯಂತೆ ಬಳಸಿದರೆ, ಕಾಂಗ್ರೆಸ್ ಸೂಜಿಯಂತೆ ಸಮಾಜ ಒಂದುಗೂಡಿಸುವ ಕೆಲಸ ಮಾಡುತ್ತಿದ್ದೇವೆ.
ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನಾವು ಯೋಜನೆ ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ಅವರು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ.
ಈ ಯೋಜನೆ ಹೇಗೆ ಮಾಡುತ್ತೀರಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಇಂಧನಸಚಿವನಾಗಿದ್ದಾಗ 10 ಸಾವಿರ ಮೆ.ವ್ಯಾ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು ನಾನು ಅಧಿಕಾರದಿಂದ ಕೆಳಗೆ ಇಳಿಯುವಾಗ 20 ಸಾವಿರ ಮೆ.ವ್ಯಾ ಗೆ ಏರಿಸಿದ್ದೇವೆ. ಬಿಜೆಪಿಯ 40% ಕಮಿಷನ್ ಲಂಚವನ್ನು ನಿಲ್ಲಿಸಿದರೆ ಸಾಕು, ಈ ಯೋಜನೆ ಜಾರಿ ಮಾಡಬಹುದು. ರಾಜ್ಯದಲ್ಲಿ ಪರಿಶುದ್ಧ ಆಡಳಿತ ನೀಡಿ ರಾಜ್ಯಕ್ಕೆ ಬಂದಿರುವ ಕಳಂಕ ತೊಳೆಯುತ್ತೇವೆ.
ರಾಜ್ಯದೆಲ್ಲೆಡೆ ಬೇರೆ ಪಕ್ಷಗಳಿಂದ ನಾಯಕರು ಪಕ್ಷ ಸೇರುತ್ತಿದ್ದಾರೆ. ಬಿಜೆಪಿಯಿಂದಲೂ ಕೆಲ ನಾಯಕರು ಬರಲು ಸಿದ್ಧರಿದ್ದಾರೆ. ಚಿತ್ರದುರ್ಗದ ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಪಕ್ಷ ಸೇರಲು ಮುಂದಾಗಿದ್ದು, ನಾನೇ ಅವರನ್ನು ತಡೆದಿದ್ದೇನೆ. ಅಧಿವೇಶನ ಮುಗಿಯಲಿ ಹೊಸ ಪಟ್ಟಿ ಬರುತ್ತದೆ. ದಳದಿಂದ ಮಧುಬಂಗಾರಪ್ಪ, ವೈಎಸ್ ವಿ ದತ್ತಾ ಅವರಿಂದ ಅನೇಕ ನಾಯಕರು ಬಂದಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ನೀಡುತ್ತೇವೆ. ಹೀಗಾಗಿ ನೀವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಗೆಲ್ಲುವಂತೆ ಕೆಲಸ ಮಾಡಬೇಕು. ನಾವು ಸಮೀಕ್ಷೆ ಮಾಡಿಸಿದ್ದು, ನಮ್ಮ ಪಕ್ಷ 136 ಸ್ಥಾನ ಗೆಲ್ಲುವುದು ಖಚಿತವಾಗಿದೆ.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಹಸ್ತಕ್ಕೆ ಮತ ಹಾಕಿ ಶಕ್ತಿ ತುಂಬಬೇಕು.