ಟರ್ಕಿಯಲ್ಲಿ ಮತ್ತೆರಡು ಬಾರಿ ಪ್ರಬಲ ಭೂ ಕಂಪನ: ಮೃತರ ಸಂಖ್ಯೆ 7,900ಕ್ಕೆ ಏರಿಕೆ;
ಭೂ ಕಂಪನದ ಮಹಾ ದುರಂತಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಜನರ ಆಕ್ರಂದನ, ನೆರವಾಗಿನ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಒಂದರ ಮೇಲೊಂದರಂತೆ ಕಂಪನಗಳು ಎದುರಾಗುತ್ತಿದ್ದು, ಜನಜೀವನವನ್ನು ಮತ್ತಷ್ಟು ಛಿದ್ರಗೊಳಿಸಿದೆ. ಅಂಕಾರಾ(ಟರ್ಕಿ)/ಅಜ್ಮರಿನ್ (ಸಿರಿಯಾ): ಭೂಕಂಪನದ ಮಹಾ ದುರಂತಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಜನರ ಆಕ್ರಂದನ, ನೆರವಾಗಿನ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಒಂದರ ಮೇಲೊಂದರಂತೆ ಕಂಪನಗಳು ಎದುರಾಗುತ್ತಿದ್ದು, ಜನಜೀವನವನ್ನು ಮತ್ತಷ್ಟು ಛಿದ್ರಗೊಳಿಸಿದೆ
ಈ ನಡುವೆ ಸೋಮವಾರದ ಭೂಕಂಪದಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಮಂಗಳವಾರ ಮತ್ತೆ ರಿಕ್ಟರ್ ಮಾಪಕದಲ್ಲಿ 7.6 ಮತ್ತು 6 ತೀವ್ರತೆ ಹೊಂದಿದ್ದ ಎರಡು ಭೂಕಂಪ ಸಂಭವಿಸಿದ್ದು, ಪತನದ ಅಂಚಿನಲ್ಲಿದ್ದ ಮತ್ತಷ್ಟು ಕಟ್ಟಡಗಳನ್ನು ನೆಲಸಮ ಮಾಡಿವೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ ಪರಿಣಾಮ ಮೃತರ ಸಂಖ್ಯೆ ಕನಿಷ್ಠ 7,926ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟರ್ಕಿಯಲ್ಲಿ ಕನಿಷ್ಠ 5,894 ಜನರು ಸಾವನ್ನಪ್ಪಿದ್ದು, 34,810 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ಹೇಳಿದ್ದಾರೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮೂರು ತಿಂಗಳ ಅವಧಿಗೆ ಟರ್ಕಿಯ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ರಾಜಧಾನಿ ಅಂಕಾರಾದಲ್ಲಿರುವ ರಾಜ್ಯ ಮಾಹಿತಿ ಸಮನ್ವಯ ಕೇಂದ್ರವನ್ನು ಉದ್ದೇಶಿಸಿ ಮಾತನಾಡಿದ ಎರ್ಡೊಗನ್, “ಸಂವಿಧಾನದ 119 ನೇ ವಿಧಿ ನಮಗೆ ನೀಡಿದ ಅಧಿಕಾರದ ಆಧಾರದ ಮೇಲೆ ನಾವು ತುರ್ತು ಪರಿಸ್ಥಿತಿಯನ್ನು ಘೋಷಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದರು.
ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ನಲುಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದಲಾಗಿದ್ದು, ಮೂರು ತಿಂಗಳ ತುರ್ತು ಪರಿಸ್ಥಿತಿ ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದರು. ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿನ ರಕ್ಷಣಾ ಕಾರ್ಯಾಚರಣೆಯೊಂದಿಗೆ ಕೈಜೋಡಿಸಿರುವ ಮೆಕ್ಸಿಕೋ ತನ್ನ ದೇಶದ ಪ್ರಸಿದ್ಧ ರಕ್ಷಣಾ ನಾಯಿಗಳನ್ನು ಟರ್ಕಿಗೆ ರವಾನಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಮೆಕ್ಸಿಕೋ, ಉತ್ತರ ಅಮೆರಿಕಾದ ಟೆಕ್ಟೋನಿಕ್ ಪ್ಲೇಟ್ನ ಅಂಚಿನಲ್ಲಿರುವ ಕಾರಣ ಭೂಕಂಪಗಳು ಇಲ್ಲಿ ಹೆಚ್ಚಾಗಿ ಸಂಭವಿಸಿರುತ್ತದೆ.
ಹೀಗಾಗಿ ನಾಯಿಗಳಿಗೆ ವಿಶೇಷ ತರಬೇತಿಗಳನ್ನು ನೀಡಲಾಗಿರುತ್ತದೆ. ಟರ್ಕಿಯಲ್ಲಿ ಮೊದಲ ಭೂಕಂಪನ ರಿಕ್ಟರ್ ಮಾಪನದಲ್ಲಿ 7.8ರಷ್ಟು ದಾಖಲಾಗಿತ್ತು. ಎರಡನೇ ಕಂಪನ 7.6 ತೀವ್ರತೆಯದ್ದಾಗಿದ್ದರೆ, ಮೂರನೆಯದ್ದು 6.0 ತೀವ್ರತೆ ಹೊಂದಿತ್ತು. ಈಗ ನಾಲ್ಕನೇ ಕಂಪನ 5.9 ರಷ್ಟು ದಾಖಲಾಗಿದೆ. ಟರ್ಕಿ ಮತ್ತು ಸಿರಿಯಾದ ದುರಂತವು 5,600ಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚುವಂತೆ ಮಾಡಿದೆ.
ಅನೇಕ ನಗರಗಳಲ್ಲಿ ಕಟ್ಟಡಗಳು ನಾಮಾವಶೇಷವಾಗಿವೆ. ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾ ನಡುವಿನ 250 ಮೈಲು ಉದ್ದದ ಪ್ರದೇಶದಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮತ್ತಷ್ಟು ವಿಚಾರಗಳು ಬಹಿರಂಗಗೊಳ್ಳಲಿದೆ. ಅದರಲ್ಲೂ ಎರಡು ದೇಶಗಳಲ್ಲಿನ ಕೆಲ ಪ್ರದೇಶಗಳು ಇನ್ನೂ ಯಾರ ಸಂಪರ್ಕಕ್ಕೂ ಬಂದಿಲ್ಲ. ಇದು ಬೇರೆಲ್ಲ ವಿಷಯಗಳಿಗಿಂದ ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ.