ಬನ್ನಿ ರಾಯಚೂರಿಗೆ. ಮಾಜಿ ಸಿಎಂ ಸಿದ್ದುಗೆ ಎರಡು ಎಕರೆ ಜಮೀನು ಆಫರ್ ನೀಡಿದ ಅಭಿಮಾನಿ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ನಿಲ್ಲುತ್ತಾರೆ ಎಂಬುದು ಇನ್ನು ಖಚಿತವಾಗಿಲ್ಲ. ಬಾದಾಮಿಯೋ? ಕೋಲಾರವೋ? ವರುಣಾವೋ? ಅಥವಾ ಚಾಮುಂಡೇಶ್ವರಿಯೋ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದು ಘೋಷಿಸಿದ್ದರೂ ಇನ್ನು ಅಧಿಕೃತವಾಗಿಲ್ಲ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗಲೇ ಯಾವ ಕ್ಷೇತ್ರ ಅಂತಾ ಖಚಿತವಾಗುವುದು. ಇದರ ನಡುವೆ ಸಿದ್ದರಾಮಯ್ಯ ಅಭಿಮಾನಿಗಳು ಅವರಿಗೆ ಬಂಪರ್ ಆಫರ್ ನೀಡುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಸ್ಫರ್ಧಿಸಿದರೆ ಹಣದ ಸಹಾಯ ಮಾಡುವುದಾಗಿ ಆಫರ್ಗಳ ಸುರಿಮಳೆಗೈಯುತ್ತಿದ್ದಾರೆ.
ಯಾದಗಿರಿ ಕ್ಷೇತೃದಿಂದ ಸ್ಫರ್ಧೆ ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಾಜಿ ತಾಪಂ ಸದಸ್ಯ ಚಂದ್ರಯ್ಯಾ ನಾಗರಾಳ ಎಂಬುವರು ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ಆಫರ್ ನೀಡಿದ್ದರು. ಇದೀಗ ಕಲ್ಯಾಣ ಕರ್ನಾಟಕ ಭಾಗದ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಮತ್ತೊಂದು ಬಿಗ್ ಆಫರ್ ಬಂದಿದೆ.
ರಾಯಚೂರು ಜಿಲ್ಲೆಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಅಭಿಮಾನಿಯೊಬ್ಬ ಒತ್ತಾಯಿಸಿದ್ದು, ಸ್ಪರ್ಧೆ ಮಾಡಿದ್ರೆ ಎರಡು ಎಕರೆ ಜಮೀನು ಮಾರಿ ಹಣ ಕೊಡುವ ಭರವಸೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಅಥವಾ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಯುವ ರೈತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶರಣು ಕಡ್ಡೋಣಿ ಅವರು ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ತನ್ನ ಪಾಲಿನ ಎರಡು ಎಕರೆ ಜಮೀನು ಮಾರಾಟ ಮಾಡಿ ಚುನಾವಣೆ ಹಣ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಶರಣು ಕಡ್ಡೋಣಿ, ರಾಯಚೂರು ಜಿಲ್ಲೆ, ಲಿಂಗಸೂಗೂರು ತಾಲೂಕಿನ ಚಿಕ್ಕಹೊಸರೂರು ಗ್ರಾಮದ ಅಭಿಮಾನಿ