ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲ್ಲೂಕಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ
ಹಾವೇರಿ: ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲ್ಲೂಕಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹಿರೇಕೆರೂರು ಮತ್ತು ಬ್ಯಾಡಗಿ ತಾಲ್ಲೂಕಿನ 56 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆಯ ಲೋಕಾರ್ಪಣೆ, ರಟ್ಟಿಹಳ್ಲಿ ತಾಲ್ಲೂಕಿನ 7 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ, ಹಾಗೂ ಹಿರೇಕೆರೂರು ಮತ್ತು ರಟ್ಟೀಹಳ್ಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿ ಚಿತ್ರಣವೇ ಬದಲಾಗಿದೆ
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರು ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದವರು. ಅವರ ಕಾಲದಲ್ಲಿ ಪ್ರಾರಂಭವಾದ ಸರ್ವಜ್ಞ ಏತನೀರಾವರಿ, ಕೆರೆ ತುಂಬಿಸುವ ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳು, ಇವೆಲ್ಲಕ್ಕೂ ಇಂದು ಚಾಲನೆ ಹಾಗೂ ಉದ್ಘಾಟನೆಯನ್ನು ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ರೂವಾರಿ ಸಚಿವ ಬಿ.ಸಿ.ಪಾಟೀಲರು. ಅವರ ನೇತೃತ್ವದಲ್ಲಿ ಹಿರೇಕೆರೂರು ತಾಲ್ಲೂಕಿನ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಸುಮಾರು 25-30 ವರ್ಷಗಳ ಬೇಡಿಕೆಗಳನ್ನು ಈ ಅವಧಿಯಲ್ಲಿ ಪೂರ್ಣ ಮಾಡಿದ್ದಾರೆ. ರಾಜಿನಾಮೆ ನೀಡಿದಾಗ ಈ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಪ್ರತಿಜ್ಞೆಯನ್ನು ಅವರು ನಡೆಸಿಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಂಡ ಧೀಮಂತ ನಾಯಕರು ಬಿ.ಸಿ.ಪಾಟೀಲರು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಬಿ.ಸಿ. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
.