ಬೆಂಗಳೂರು ನಗರ

ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು CITU ಮನವಿ

ಬೆಂಗಳೂರು: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ದುಡಿಯುತ್ತಿರುವ ಕಾರ್ಮಿಕರ  ವೇತನ ಒಪ್ಪಂದ ಅವಧಿ ಮುಗಿದು ೨೨ ತಿಂಗಳು ಕಳೆದರೂ ವೇತನ ಏರಿಕೆ ಸಂಬಂಧಿಸಿದಂತೆ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ ಮತ್ತು ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಬೆಂಗಳೂರಿನ ಕೋರಮಂಗಲದ ಪ್ರಧಾನ ಕಛೇರಿಯಲ್ಲಿ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಹಟ್ಟಿ ಘಟಕ ಮನವಿ ಸಲ್ಲಿಸಿದೆ.

ಗಣಿಯಲ್ಲಿ ಕಾರ್ಮಿಕರು ಹಗಲಿರುಳು ದುಡಿಮೆ ಮಾಡಿ ಚಿನ್ನವನ್ನು ಉದ್ಪಾದನೆ ಮಾಡುತ್ತಾರೆ. ಗಣಿಯಲ್ಲಿನ ದುಡಿಮೆಯು, ಪ್ರಾಣವನ್ನು ಒತ್ತೆ ಇಟ್ಟು ಭೂಗರ್ಭದಲ್ಲಿಳಿದು ದುಡಿಮೆ ಮಾಡುತ್ತಾರೆ. ಭೂ-ಕೆಳಮೈಯಲ್ಲಿ ಸರಿಯಾದ ವಾತಾವರಣವಿರುವುದಿಲ್ಲ. ಇದರಿಂದ ಕಾರ್ಮಿಕರ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಾರ್ಮಿಕರ ಶ್ರಮವಹಿಸಿ ಮತ್ತು ಕುಟುಂಬದ ನಿರ್ವಹಣೆಗಾಗಿ ಶ್ರಮಿಸುತ್ತಿದ್ದಾರೆ. ಕಾರ್ಮಿಕರಿಗೆ ಮತ್ತು ಕುಟುಂಬ ಸದಸ್ಯರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಹಾಗೂ ಸರಿಯಾದ ಔಷಧ ಸಿಗುತ್ತಿಲ್ಲ. ಇದು ಕಾರ್ಮಿಕರ ವಿರೋಧಿ ನೀತಿ ಎಂದು ಸಿಐಟಿಯು ಆರೋಪಿಸಿದೆ.

ವರ್ಷಕ್ಕೆ ಸಿಗುವ ಬೋನಸು, ಎಕ್ಸ್ಗ್ರೇಸಿಯಾ ಹಾಗೂ ಪಿ.ಎಲ್.ಐ.ಬಿ. ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಅಲ್ಲದೆ, 2 ವರ್ಷಗಳು (2020 ಹಾಗೂ 2021) ಪಿ.ಎಲ್.ಐ.ಬಿ. ಬಿಡುಗಡೆಯಾಗಿಲ್ಲ. ಇನ್ನು ವೇತನ ಒಪ್ಪಂದ ಅವಧಿ ಮುಗಿದು 22 ತಿಂಗಳವಾಗಿದೆ. ಕಾರ್ಮಿಕರ ಸಂಘದ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೇತನ ಒಪ್ಪಂದ ಮಾಡಿಕೊಳ್ಳುವಲ್ಲಿ ಸಂಸ್ಥೆಯು ವಿಫಲವಾಗಿದೆ. ಇದು ಕಾರ್ಮಿಕರ ಬಗೆದ ದ್ರೋಹವಾಗಿದೆ ಎಂದು ಸಿಐಟಿಯು ಟೀಕಿಸಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಮಿಕರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಒದಗಿಸಬೇಕು. ಗಣಿ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ದಾದಿಯರು(ಸ್ಟಾಪ್ ನರ್ಸ್) ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಖಾಯಂ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ  ಒತ್ತಾಯಿಸಿದ್ದಾರೆ.

ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ವಿದ್ಯಾಬ್ಯಾಸ ಮಾಡಿದ ಕಾರ್ಮಿಕರ ಸುಮಾರು 8 ವರ್ಷಗಳಿಂದ ಜಿ-12 ಗ್ರೇಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ವಿದ್ಯಾರ್ಹತೆ ಗೆ ತಕ್ಕಂತೆ ಗ್ರೇಡ್ ನೀಡಿ ನ್ಯಾಯ ಒದಗಿಸಬೇಕು, ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಒಂದೇ ರೀತಿಯ ವಸತಿ ಗೃಹಗಳನ್ನು ನೀಡಬೇಕು. ಕಾರ್ಮಿಕರು ವಾಸಿಸುವ ವಸತಿ ಪ್ರದೇಶದಲ್ಲಿ ಪರಿಸರ, ರಸ್ತೆ, ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಮನವಿ ಪತ್ರವನ್ನು ವ್ಯವಸ್ಥಾಪಕ ನಿರ್ದೇಶಕರ ಆಪ್ತ ಸಹಾಯಕಿ ಮೇರಿ ಅವರು ಸ್ವೀಕರಿಸಿದರು.

ಸಿಐಟಿಯು ನಿಯೋಗದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ಎಂಡಿ ಹನೀಫ್, ಹಟ್ಟಿ ಘಟಕದ ಅಧ್ಯಕ್ಷ ಅಸನತ್ ಅಲಿ ಜಮಾದಾರ್, ಪ್ರಧಾನ ಕಾರ್ಯದರ್ಶಿ ಬಾಬು ಸಾಗರ್, ಖಜಾಂಚಿ ಫಕ್ರುದ್ದೀನ್, ಸಹ ಕಾರ್ಯದರ್ಶಿ ವೆಂಕಟೇಶ್ ಮೆದಿನಾಪೂರು, ಅಲ್ಲಾಭಕ್ಷ, ಶರಣಬಸವ, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ಸಿಐಟಿಯು ಮುಖಂಡರಾದ ನಿಂಗಪ್ಪ ಎಂ., ಪಾಲ್ ಸನ್, ಪವನ್ ಕುಮಾರ್, ಮೌನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button