ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ 67 ಕೋಟಿ ರೂ. ಡಿಪಿಆರ್ ಸಿದ್ಧ
ಕಲಬುರಗಿ: ತೊಗರಿ ಬೆಳಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಲು ತೀರ್ಮಾನಿಸಿದ್ದು, ಇಂದು ಸಂಜೆ 4 ಗಂಟೆಗೆ ಸಭೆ ಕರೆದಿದ್ದು, ಕೃಷಿ ಇಲಾಖೆ, ಆರ್ಥಿಕ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಗಳ ಸಭೆಯಲ್ಲಿ ಪರಿಹಾರ ಎಷ್ಟು ಕೊಡಬೇಕೆಂದು ತೀರ್ಮಾನಿಸಿ, ಇಂದು ಸಂಜೆ ಘೋಷಣೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಭಾಗದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ವಿಶೇಷವಾಗಿ ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ತೊಗರಿ ನಾಶವಾಗಿದ್ದು, ಅದಕ್ಕೆ ಪರಿಹಾರ ನೀಡಲು ರೈತರು ಕೂಡ ಒತ್ತಾಯ ಮಾಡಿದ್ದಾರೆ ಎಂದರು.
ವಿಠಲ ಹೇರೂರ ಅವರ ಮೂರ್ತಿಯ ಅನಾವರಣ ಹಾಗೂ ಗಾಣಗಾ ಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಜಿಲ್ಲಾಡಳಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಸುಮಾರು 60 ಕೋಟಿ ಗಿಂತ ಹೆಚ್ಚು ಅನುದಾನದ ಅಗತ್ಯವಿದೆ. ಕಾಶಿ ವಿಶ್ವನಾಥ, ಉಜ್ಜಯನಿಯ ಕಾಳಹಸ್ತಿಯಲ್ಲಿ ನಿರ್ಮಿಸಿರುವಂತೆ ಕಾರಿಡಾರ್ ನಿರ್ಮಿಸಬೇಕು ಎಂದು 67 ಕೋಟಿ ರೂ.ಗಳ ಡಿಪಿಆರ್ ಸಿದ್ದ ಮಾಡಿದ್ದಾರೆ.ಬರುವ ಬಜೆಟ್ ನಲ್ಲಿ ಸರ್ಕಾರ ಕಾರಿಡಾರ್ ನಿರ್ಮಾಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರಧಾನಿಗಳಿಂದ ಏರೋ ಇಂಡಿಯಾ ಷೋ ಉದ್ಘಾಟನೆ
ಕಲಬುರಗಿಗೆ ಆಗಮಿಸಿದ ಕೂಡಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಕ್ಷಣಾ ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ ಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು. ಫೆ 13 ನೇ ತಾರೀಖಿನಿಂದ ಪ್ರಾರಂಭವಾಗುವ ಏರೋ ಇಂಡಿಯಾ ಷೋ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, 1996 ರಿಂದ ಬೆಂಗಳೂರಿನ ಏರ್ ಫೋರ್ಸ್ ನಿಲ್ದಾಣದಲ್ಲಿ ನಿರಂತರವಾಗಿ ಕರ್ನಾಟಕ ಆತಿಥ್ಯ ವಹಿಸಿದೆ. ಈ ಬಾರಿ ಅತಿ ದೊಡ್ಡ ಏರ್ ಷೋ ನಡೆಯಲಿದ್ದು, ಅತಿ ಹೆಚ್ವು ಜನ ಭಾಗವಹಿಸುತ್ತಿದ್ದಾರೆ. ಗಣ್ಯರು, ಏರೋಸ್ಪೇಸ್ ಮುಖ್ಯಸ್ಥರು, ಕಂಪನಿಗಳ ಸಿಇಒಗಳು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ, ಕರ್ನಾಟಕ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಏರೋಸ್ಪೇಸ್ ಕಂಪನಿಗಳ ವಸ್ತುಪ್ರದರ್ಶನವಿದೆ. ಸಾರ್ವಜನಿಕರು ನೋಡಲು ಏರ್ ಷೋ ಕೂಡ ಇರಲಿದೆ. ಇಂಥ ಬೃಹತ್ ಷೋ ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಅದರ ಪೂರ್ವಭಾವಿ ಸಿದ್ಧತೆಗಳ ವೀಡಿಯೋ ಸಂವಾದ ನಡೆಯಿತು ಎಂದರು.
ಪಿ.ಎಸ್.ಐ ನೇಮಕಾತಿಗೆ ಸಂಬಂಧಿಸಿದಂತೆ ಆರೋಪಿ ರುದ್ರೇಗೌಡ ತನಿಖಾಧಿಕಾರಿಗಳು ಡಿವೈಎಸ್ಪಿ ಶಂಕರಗೌಡರು 3 ಕೋಟಿ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆರೋಪಿ ಹೇಳಿಕೆ ಬಗ್ಗೆ ಮಾಹಿತಿ ಅಲ್ಲಿಯ ತನಿಖಾಧಿಕಾರಿ ಬಳಿ ಇರುತ್ತದೆ. ಮೊದಲು ಅವರ ಮೇಲಿನ ಆರೋಪ, ಕೋರ್ಟಿನ ಆದೇಶ, ನ್ಯಾಯಾಂಗ ಬಂಧನ ಎಲ್ಲಾ ಕಾನೂನಿನ ಪ್ರಕಾರ ತನಿಖೆ ಯಾಗುತ್ತದೆ.ಅದೇ ರೀತಿ ಆತ ನೀಡಿರುವ ಸಾಕ್ಷ್ಯಾಧಾರಗಳ ಮೇಲೆ ಅಧಿಕಾರಿಯ ಮೇಲೂ ತನಿಖೆ ನಡೆಯಲಿದೆ ಎಂದರು.