ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ
ಕಲಬುರಗಿ: ನಾನಿದ್ದೇನೆ, ನಾನಿನ್ನೂ ಬದುಕಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಸೇರಿ ಯಾರೊಬ್ಬರ ಪ್ರಾಣವೂ ಹೋಗಬಾರದು. ಚುನಾವಣೆ ನಂತರ ಜಾತ್ಯತೀತ ಜನದಾಳ ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ಅನ್ನದಾತರ ನೆರವಿಗೆ ಧಾವಿಸಿ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.
2018ರಲ್ಲಿ ನಾನು 25,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೆ. ಆದರೆ, ನನ್ನ ಸರಕಾರವನ್ನು ಆಪರೇಶನ್ ಕಮಲದ ಮೂಲಕ ತೆಗೆದು ಅಧಿಕಾರಕ್ಕೆ ಬಿಜೆಪಿ ಸರಕಾರ ಈ ಮೊತ್ತದಲ್ಲಿ ಸುಮಾರು 7000 ಕೋಟಿ ರೂಪಾಯಿ ಸಾಲ ಮನ್ನಾ ಹಣವನ್ನು ರಾಷ್ಟ್ರೀಯ ಬ್ಯಾಂಕುಗಳಿಗೆ ಜಮೆ ಮಾಡದೆ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡಿತು. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ಸಾಲ ಮನ್ನಾ ಫಲಾನುಭವಿಗಳಿಗೆ ಅನ್ಯಾಯ ಆಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಚುನಾವಣೆ ನಂತರ ನಾನು ಅಧಿಕಾರಕ್ಕೆ ಬಂದರೆ ಬಿಜೆಪಿ ಸರಕಾರದಿಂದ ಅನ್ಯಾಯಕ್ಕೆ ತುತ್ತಾದ ಎಲ್ಲಾ ಕುಟುಂಬಗಳ ಸಾಲ ಮನ್ನಾ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದರು.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಇಂದು ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಅವರು ಭಾಷಣ ಮಾಡಿದರು.
ಪೂರ್ಣ ಪ್ರಮಾಣದ ಐದು ವರ್ಷಗಳ ಸರಕಾರ ಕೊಟ್ಟರೆ ಎಲ್ಲಾ ರೈತರ ಸಾಲ ಮನ್ನಾ ಮಾಡಿ, ಇಡೀ ರೈತ ಸಂಕುಲಕ್ಕೆ ಚೈತನ್ಯ ನೀಡುತ್ತೇನೆ. ಶಾಶ್ವತವಾಗಿ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತ ಚೈತನ್ಯ ಯೋಜನೆಯನ್ನು ಜಾರಿಗೆ ತರುತ್ತೇನೆ. ಪಂಚರತ್ನ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲ ಆಗುತ್ತವೆ. ದುಡುಕಿ ನಿಮ್ಮನ್ನು ನಂಬಿರುವ ಕುಟುಂಬಕ್ಕೆ ಅನ್ಯಾಯ ಮಾಡಬೇಡಿ. ಅವರನ್ನು ಅನಾಥರನ್ನಾಗಿ ಮಾಡಬೇಡಿ ಎಂದು ಅವರು ಹೇಳಿದರು.
ನನ್ನ ಮೇಲೆ ನಂಬಿಕೆ ಇಟ್ಟು ಇನ್ನು ನಾಲ್ಕು ತಿಂಗಳ ಕಾಲ ತಡೆದುಕೊಳ್ಳಿ, ಸಾಲದ ಹೊರೆ ಹೊತ್ತು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರದಲ್ಲಿ ಅವರು ಮನವಿ ಮಾಡಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರೈತರಿಗೆ ನೀಡಿದ ಭರವಸೆ ಈಡೇರಿಸಿದ್ದೇನೆ. ನನಗೆ ಪೂರ್ಣ ಬಹುಮತದ ಸರಕಾರ ದೊರಕದಿದ್ದರೂ ಮೈತ್ರಿ ಸರಕಾರದಲ್ಲಿ ಇದ್ದ ಇತಿಮಿತಿಯಲ್ಲೇ ರೈತರ ಪೂರ್ಣ ಕೃಷಿ ಸಾಲ ಮನ್ನಾ ಮಾಡಿದ್ದೇನೆ. ಸಾಲಕ್ಕೆ ಭಯಪಟ್ಟು ಕುತ್ತಿಗೆಯನ್ನು ನೇಣಿಗೆ ಕೊಡಬೇಡಿ. ನಿಮ್ಮ ಜತೆ ನಾನಿದ್ದೇನೆ. ನೀಡಿದ ಭರವಸೆಯನ್ನು ಈಡೇರಿಸುತ್ತೇನೆ. ನನಗೆ ಒಮ್ಮೆ ಬಹುಮತದ ಸರಕಾರ ನೀಡಿ ಎಂದು ಮನವಿ ಕುಮಾರಸ್ವಾಮಿ ಅವರು ಮಾಡಿಕೊಂಡರು.
ಇತ್ತೀಚೆಗೆ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಮೂರು ದಿನಗಳ ಹಿಂದೆ ಆಳಂದದಲ್ಲಿ ರೈತರೊಬ್ಬರು ಅನಾರೋಗ್ಯ ಪೀಡಿತರಾದ ತನ್ನ ಧರ್ಮಪತ್ನಿ ಅವರ ದುಸ್ಥಿತಿ ಕಂಡು ತನ್ನಿಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಯಮಾಡಿ ಯಾವ ರೈತನೂ, ಸಾಮಾನ್ಯ ವ್ಯಕ್ತಿಯೂ ಇಂಥ ವಿಪರೀತ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಕೈಜೋಡಿಸಿ ಮನವಿ ಮಾಡಿಕೊಂಡರು.
ಬಿಜೆಪಿಯ ಡಬಲ್ ಎಂಜಿನ್ ಸರಕಾರ ರೈತರ ಕಡೆ ಗಮನ ಹರಿಸುತ್ತಿಲ್ಲ. ರೈತರಿಗೆ ಈ ಸರಕಾರದಲ್ಲಿ ಪರಿಹಾರ ದೊರೆಯುತ್ತಿಲ್ಲ. ರೈತರ ಮೂರು ನಾಲ್ಕು ತಿಂಗಳ ದೈರ್ಯದಿಂದ ಕಾಲ ತಳ್ಳಿ. ನನಗೆ ವಿಶ್ವಾಸವಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತೇನೆ. ನಿಮ್ಮ ಬದುಕಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.
ರೈತ ಬಂಧು ಯೋಜನೆ ಜಾರಿ
ಆರೋಗ್ಯ, ಶಿಕ್ಷಣ, ಕೃಷಿಗಾಗಿ ಸಾಲದ ಶೂಲಕ್ಕೆ ಸಿಲುಕಬೇಡಿ. ನಿಮ್ಮ ಬದುಕನ್ನು ನಾನು ಹಸನು ಮಾಡುತ್ತೇನೆ. ದಿನದ 24 ಗಂಟೆಕಾಲ ಕೃಷಿಗೆ ಗುಣಮಟ್ಟದ ಉಚಿತ ವಿದ್ಯುತ್ ನೀಡುವ ಯೋಜನೆ ತರುತ್ತೇನೆ. ತೆಲಂಗಾಣದಲ್ಲಿ ಜಾರಿಯಲ್ಲಿ ಇರುವಂತೆ ರೈತ ಬಂಧು ಯೋಜನೆ ಜಾರಿ ಮಾಡುತ್ತೇನೆ. ಪ್ರತಿ ಎಕರೆಗೆ ಹತ್ತು ಸಾವಿರ ರೂಯಿಗಳನ್ನು ನಾನು ಕೊಡುತ್ತೇನೆ, ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಸಾಲ ಮಾಡಬೇಕಿಲ್ಲ. ಪ್ರತಿ ಮಳೆಗಾಲಕ್ಕೆ ಮುನ್ನ ಈ ಹಣ ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಅವರು ಭರವಸೆ ನೀಡಿದರು.
ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡುವ ಖಾತರಿ ಕೊಡುತ್ತೇನೆ. ಬೆಳೆ ಕೆಡದಂತೆ ಸಂರಕ್ಷಣೆ ಮಾಡಲು ಕೋಲ್ಡ್ ಸ್ಟೋರೇಜ್ ಗಳನ್ನು ಪ್ರತೀ ಪಂಚಾಯತಿ ಮಟ್ಟದಲ್ಲಿ ನಿರ್ಮಾಣ ಮಾಡುತ್ತೇನೆ ಎಂದರು ಅವರು.
ವಿಮೆ ಹೆಸರಿನಲ್ಲಿ ರೈತರಿಗೆ ವಂಚನೆ
193 ಕೋಟಿ ರೂಪಾಯಿ ಬೆಳೆ ವಿಮೆ ಹಣವನ್ನು ರೈತರು ಕಟ್ಟಿದ್ದಾರೆ. ಆದರೆ ವಿಮಾ ಕಂಪನಿಯಗಳು ನಿಮಗೆ ನೀಡಿರುವುದು ಕೇವಲ 28 ಕೋಟಿ ಮಾತ್ರ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಲ್ಲಿ ಕೇಂದ್ರ ಸರಕಾರ ರೈತರಿಗೆ ವಂಚನೆ ಮಾಡುತ್ತಿದೆ. ನಿಮ್ಮಲ್ಲ ಕಷ್ಟ ಸುಖಗಳನ್ನು ಬಗೆಹರಿಸಲು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂಬ ವಿಶ್ವಾಸ ತಮಗಿದೆ ಎಂದರು ಮಾಜಿ ಮುಖ್ಯಮಂತ್ರಿ ಅವರು.
ಸಭೆಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ಸೇಡಂ ಕ್ಷೇತ್ರದ ಅಭ್ಯರ್ಥಿ ಬಾಲರಾಜ್ ಗುತ್ತೇದಾರ್, ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಸಂಜೇವನ್ ಯಾಕಾಪುರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುರೇಶ್ ಮಾಗಾವಂಕರ್ ಮುಂತಾದವರು ಹಾಜರಿದ್ದರು.