ಚರಂಡಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು
ರಾಯಚೂರು: ಅಧಿಕಾರಿಗಿಳ ನಿರ್ಲಕ್ಷ್ಯಕ್ಕೆ ಇಬ್ಬರು ಮಕ್ಕಳು ಬಲಿಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಚರಂಡಿಗೆಂದು ತೋಡಿಟ್ಟ ಗುಂಡಿಗೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬ್ಯಾಗವಾಟ್ ನಲ್ಲಿ ಸಂಭವಿಸಿದೆ.
ಬ್ಯಾಗವಾಟ್ ನಲ್ಲಿ ಚರಂಡಿ ನಿರ್ಮಾಣಕ್ಕೆಂದು ಗುಂಡಿಯನ್ನು ತೋಡಲಾಗಿತ್ತು. ಗುಂಡಿ ತೋಡಿ ಎರಡು ಮೂರು ತಿಂಗಳಾದರೂ ಚರಂಡಿ ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಬರಲಿಲ್ಲ. ಇದರಿಂದಾಗಿ ಚರಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಎಷ್ಟು ಬಾರಿ ಇದನ್ನು ಗಮನಕ್ಕೆ ತಂದರೂ ಅದರ ಕಡೆ ಮುಖ ಮಾಡಿರಲಿಲ್ಲ. ಈ ಚರಂಡಿ ಗುಂಡಿ ಶಾಲೆಯ ಪಕ್ಕದಲ್ಲೇ ಇದ್ದಿದ್ದು, ಒಂದೇ ಮನೆಯ ಇಬ್ಬರು ಮಕ್ಕಳು ಆಟವಾಡಲು ಹೋದಾಗ ಗುಂಡಿಯನ್ನು ಗಮನಿಸದ ಮಕ್ಕಳು ಅಕಸ್ಮಿಕವಾಗಿ ಕಾಲು ಜಾರಿ (2 boys dead) ಗುಂಡಿಗೆ ಬಿದ್ದಿದ್ದಾರೆ. ಅಜಯ್ (8 ವರ್ಷ) ಹಾಗೂ ಸುರೇಶ( 6 ವರ್ಷ) ಇಬ್ಬರು ಮೃತಪಟ್ಟ ಬಾಲಕರು ಎಂಬ ಮಾಹಿತಿ ಲಭ್ಯವಾಗಿದೆ.
ಗುಂಡಿಯಿಂದ ಮಕ್ಕಳನ್ನು ಹೊರತೆಗೆಯುವಷ್ಟರಲ್ಲಿ ಮಕ್ಕಳು ಆಗಲೇ ಉಸಿರು ಚೆಲ್ಲಿದ್ದರು. ಇಬ್ಬರು ಒಂದೇ ಮನೆಯ ಅಣ್ಣ ತಮ್ಮಂದಿರ ಮಕ್ಕಳು ಎಂದು ಹೇಳಲಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಿಂಗಳುಗಟ್ಟಲೆಯಾದರೂ ಅಧಿಕಾರಿಗಳು ಗುಂಡಿ ಮುಚ್ಚದೇ ತಮ್ಮ ನಿರ್ಲಕ್ಷ್ಯತನ ತೋರಿ ಇಬ್ಬರು ಮಕ್ಕಳನ್ನು ಬಲಿ ಪಡೆದುಕೊಂಡಿದ್ದಾರೆ. ಹಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದರು ಕೂಡ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದನ್ನು ಬಿಡುತ್ತಿಲ್ಲ. ಹಣಕ್ಕೆ ಬೆಲೆ ಕೊಡುವ ಅಧಿಕಾರಿಗಳು ಜೀವಕ್ಕೆ ಬೆಲೆ ಕೊಡುತ್ತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಶಾಲೆಯ ಅಕ್ಕಪಕ್ಕದಲ್ಲಿ ಈ ರೀತಿಯಾಗಿ ಕಾಮಗಾರಿಯ ಹೆಸರು ಹೇಳಿ ಅಧಿಕಾರಿಗಳು ಜೀವವನ್ನು ಯಮದೂತನನ್ನು ತಂದಿಡುತ್ತಿದ್ದಾರೆ.
ಮೊಹಮದ್ ಶಫಿ, ಟಿವಿ8 ಕನ್ನಡ, ಮಾನ್ವಿ