ಮಾದರಿ ಶಾಲೆಗಳಿಗೆ ಶಿಕ್ಷಣ ಸಲಹೆಗಾರ ದೊರೆಸ್ವಾಮಿ ಭೇಟಿ; ಮುಕ್ತ ಕಂಠದ ಶ್ಲಾಘನೆ
ಬೆಂಗಳೂರು: ರಾಜ್ಯ ಸರ್ಕಾರದ ಶಿಕ್ಷಣ ಸಲಹೆಗಾರ ದೊರೆಸ್ವಾಮಿ ಅವರು ಇಂದು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೃಷಭಾವತಿ ನಗರದ 102 ನೇ ವಾರ್ಡಿನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಶಾಲೆಗೆ ಭೇಟಿ ನೀಡಿ ಶಾಲೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ, ಕಾಲೇಜುಗಳನ್ನು ಸಚಿವರು, ಶಾಸಕರು ದತ್ತು ಪಡೆದು ಅಭಿವೃದ್ಧಿಪಡಿಸಿದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಉತ್ತಮಗೊಂಡು ಒಳ್ಳೆಯ ಪ್ರತಿಭೆಗಳು ಬೆಳಕಿಗೆ ಬರುತ್ತವಲ್ಲದೇ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಪಿಎಸ್ ಕಾಲೇಜಿನ ಅಧ್ಯಕ್ಷರೂ ಆಗಿರುವ ದೊರೆಸ್ವಾಮಿ ರವರು ರಾಜ್ಯ ಸರ್ಕಾರದ ಶಿಕ್ಷಣ ಸಲಹೆಗಾರರಾಗಿರುವ ಸೇವೆ ಸಲ್ಲಿಸುತ್ತಿರುವ ಅವರು, ವೃಷಭಾವತಿ ನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲೆ ಮತ್ತು ಮಾರಪ್ಪನಪಾಳ್ಯದಲ್ಲಿರುವ ಅಂಬೇಡ್ಕರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಂಥಾಲಯ, ಶಾಲಾ ಕಟ್ಟಡ, ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ಮತ್ತು ಶೌಚಾಲಯಗಳಿಗೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದರು.
ಇದೇ ವೇಳೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಬಡಿಸಿದ ದೊರೆಸ್ವಾಮಿ ಅವರು, ಎಲ್ಲ ವಿಭಾಗಗಳಲ್ಲೂ ಸ್ವಚ್ಙತೆ ಕಾಪಾಡಿರುವುದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಒಂದೊಳ್ಳೆಯ ಬೆಳವಣಿಗೆಯಾಗಿದ್ದು, ಈ ಮಾದರಿ ಶಾಲೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುವುದು ಎಂದರು.
ಶಾಲೆಯ ಎಲ್ಲ ವಿಭಾಗಗಳು ಅಷ್ಟೊಂದು ಸುಂದರ ಮತ್ತು ಸ್ಚಚ್ಛತೆಯಿಂದ ಕೂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಶಾಲೆಗಳಿಗೆ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ವತಿಯಿಂದ 43 ಶಿಕ್ಷಕಿಯರನ್ನು ನೇಮಕಮಾಡಿ ಟ್ರಸ್ಟ್ ವತಿಯಿಂದಲೇ ಪ್ರತಿ ಮಾಸಿಕ ಈ ಶಿಕ್ಷಕಿಯರಿಗೆ ಸಂಬಳ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಎಲ್ಲ ಮಾದರಿ ಶಾಲೆಗಳನ್ನು ರಾಜ್ಯದ್ಯಂತ ಆರಂಭಿಸಿದರೆ ಶಿಕ್ಷಣಕ್ಷೇತ್ರ ಹಿಂದುಳಿಯಲು ಸಾಧ್ಯವೇ ಇಲ್ಲ. ಪ್ರತಿ ಸಚಿವರು, ಶಾಸಕರು ಈ ರೀತಿಯ ಉತ್ತಮ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಗತ್ಯ ಇದೆ ಎಂದು ದೊರೆಸ್ವಾಮಿ ಅಭಿಪ್ರಾಯಿಸಿದರು.
ಈ ವೇಳೆ ಮಕ್ಕಳ ಬೆನ್ನು ತಟ್ಟಿ ಉತ್ತಮವಾಗಿ ಓದಿ ಪೋಷಕರು, ಶಿಕ್ಷಕರು ಮತ್ತು ಈ ನಾಡಿಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೊರೆಸ್ವಾಮಿ ಅವರೊಂದಿಗೆ ಸ್ಥಳಿಯ ಶಾಸಕರು ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪುಣ್ಯಗೌಡ, tv8 ಕನ್ನಡ, ಬೆಂಗಳೂರು